ಕೋಲಾರ: ಮುರಾರ್ಜಿ ವಸತಿ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಯ ಮೇಲೆ ವಾರ್ಡನ್ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಆತನ ಅಮಾನತಿಗೆ ಪೋಷಕರು ಪಟ್ಟುಹಿಡಿದಿದ್ದಾರೆ.
ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಖಿನ ಬಾಳಸಂದ್ರ ಮುರಾರ್ಜಿ ವಸತಿ ಶಾಲೆಯಲ್ಲಿ ಆರನೇ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಜತೆಗೆ ಹಾಸ್ಟೆಲ್ನಲ್ಲಿ ದೆವ್ವವಿದೆ ಎಂದು ತಮಾಷೆ ಮಾಡಿದ್ದ. ಆತ ಹೀಗೆ ತಮಾಷೆ ಮಾಡಿದ್ದು ವಾರ್ಡ್ನ್ ಮಹೇಶ್ ಗಮನಕ್ಕೆ ಬಂದಿತ್ತು.
ಆ ವೇಳೆ ವಾರ್ಡನ್ ಮಹೇಶ್ ವಿದ್ಯಾರ್ಥಿಯನ್ನು ಕರೆಸಿ, ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಥಳಿತದಿಂದ ವಿದ್ಯಾರ್ಥಿ ಮೈಮೇಲೆ ಬಾಸುಂಡೆಗಳು ಬಂದಿದ್ದು, ಇಷ್ಟು ಸಣ್ಣ ವಿಷಯಕ್ಕೆ ಹೀಗೆ ಕೈ ಮಾಡಿರುವ ವಾರ್ಡನ್ ಅಮಾನತುಗೊಳಿಸಿ ಎಂದು ಪೋಷಕರು ಒತ್ತಾಯಿಸಿದ್ದಾರೆ.