ನವದೆಹಲಿ: “ಡಿಜಿಟಲ್ ಅರೆಸ್ಟ್” ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ಮೋಸಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕೆಂದು Reserve Bank of India (ಆರ್‌ಬಿಐ) ಸಾರ್ವಜನಿಕರಿಗೆ ಜಾಗೃತಿ ಸಂದೇಶ ನೀಡಿದೆ. ಆನ್‌ಲೈನ್ ಮೂಲಕ ಯಾರನ್ನೂ ಬಂಧಿಸುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಆರ್‌ಬಿಐ, ಈ ಪದವನ್ನು ಬಳಸಿ ಜನರನ್ನು ಭಯಭೀತಗೊಳಿಸಿ ಹಣ ಅಥವಾ ವೈಯಕ್ತಿಕ ಮಾಹಿತಿ ಪಡೆಯಲು ಮೋಸಗಾರರು ಪ್ರಯತ್ನಿಸುತ್ತಿದ್ದಾರೆ ಎಂದು ಎಚ್ಚರಿಸಿದೆ.
ಸಾಮಾನ್ಯವಾಗಿ ಸ್ಕ್ಯಾಮರ್‌ಗಳು ತಾವು ಆರ್‌ಬಿಐ, ಪೊಲೀಸ್ ಅಥವಾ ಇತರೆ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳೆಂದು ಹೇಳಿಕೊಂಡು ಆಡಿಯೋ ಅಥವಾ ವಿಡಿಯೋ ಕರೆಗಳ ಮೂಲಕ ಜನರನ್ನು ಬೆದರಿಸುವುದಾಗಿ ತಿಳಿಸಿದೆ. ಇಂತಹ ಕರೆಗಳ ಮೂಲಕ “ಡಿಜಿಟಲ್ ಅರೆಸ್ಟ್” ಎಂದು ಹೇಳಿ ಹಣ ಕಳುಹಿಸಲು ಒತ್ತಾಯಿಸುವುದು ಅಥವಾ ಬ್ಯಾಂಕ್ ಹಾಗೂ ವೈಯಕ್ತಿಕ ಮಾಹಿತಿಯನ್ನು ಕೇಳುವುದು ಸೈಬರ್ ಅಪರಾಧವಾಗಿದೆ ಎಂದು ಹೇಳಲಾಗಿದೆ.
ಆರ್‌ಬಿಐ ಜನರಿಗೆ ಕೆಲವು ಪ್ರಮುಖ ಸಲಹೆಗಳನ್ನೂ ನೀಡಿದೆ. ಯಾವುದೇ ಆಡಿಯೋ, ವಿಡಿಯೋ ಕರೆ ಅಥವಾ ಸಂದೇಶದ ಮೂಲಕ ಬಂಧಿಸುವ ಅಧಿಕಾರ ಯಾರಿಗೂ ಇಲ್ಲ. ಆದ್ದರಿಂದ ಹಣಕಾಸು ಅಥವಾ ವೈಯಕ್ತಿಕ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಕರೆ ಮಾಡುವವರ ಗುರುತು ಮತ್ತು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಸಂಶಯಾಸ್ಪದ ಸಂದರ್ಭಗಳಲ್ಲಿ ತಕ್ಷಣ ತಮ್ಮ ಬ್ಯಾಂಕ್ ಅನ್ನು ಸಂಪರ್ಕಿಸುವಂತೆ ಸೂಚಿಸಿದೆ.
ಸೈಬರ್ ಮೋಸದ ಬಗ್ಗೆ ದೂರು ನೀಡಲು ಅಥವಾ ಸಹಾಯ ಪಡೆಯಲು 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಅಥವಾ National Cyber Crime Reporting Portal ಮೂಲಕ ದೂರು ದಾಖಲಿಸಬಹುದು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆರ್‌ಬಿಐ ಜಾಗೃತಿ ವೇದಿಕೆ RBI Kehta Hai ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಮನವಿ ಮಾಡಲಾಗಿದೆ. “ಜಾಣರಾಗಿರಿ, ಜಾಗರೂಕರಾಗಿರಿ” ಎಂಬ ಸಂದೇಶದೊಂದಿಗೆ ಆರ್‌ಬಿಐ ಜನರಿಗೆ ಸುರಕ್ಷಿತ ಡಿಜಿಟಲ್ ವ್ಯವಹಾರಗಳನ್ನು ಅನುಸರಿಸುವಂತೆ ಕರೆ ನೀಡಿದೆ.

