ವಾಟರ್ ಮ್ಯಾನ್ ಗಳಿಗೂ ವಾರದ ರಜೆ : ಸರಕಾರದಿಂದ ಮಹತ್ವದ ಆದೇಶ
ಬೆಂಗಳೂರು: ಗ್ರಾಮ ಪಂಚಾಯತಿಗಳಲ್ಲಿ ವಾಟರ್ ಮ್ಯಾನ್ ಗಳಾಗಿ ಕೆಲಸ ನಿರ್ವಹಿಸುವವರಿಗೆ ವಾರದ ರಜೆ ನೀಡಲು ಸರಕಾರ ತೀರ್ಮಾನಿಸಿದೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ಕೆಲ ಷರತ್ತುಗಳೊಂದಿಗೆ ವಾರದಲ್ಲಿ ಒಂದು ದಿನ ವಾಟರ್ ಮ್ಯಾನ್ ಗಳು ರಜೆ ಪಡೆಯಬಹುದು ಎಂದು ಆದೇಶ ಮಾಡಿದೆ.
ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತಿ ನೌಕರರ ಬೇಡಿಕೆಯ ಕುರಿತು ಚರ್ಚೆ ನಡೆದಿತ್ತು. ಇದೀಗ ಇಲಾಖೆ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ವಾರದ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ವಾಟರ್ ಮ್ಯಾನ್ ಗಳು ನೀರು ಸರಬರಾಜು ಸಮಸ್ಯೆ ಆಗದಂತೆ ರೊಟೇಷನ್ ಆಧಾರದಲ್ಲಿ ರಜೆ ಪಡೆದುಕೊಳ್ಳಬೇಕು. ವಾರದ ರಜೆಯನ್ನು ತಮ್ಮ ಹಕ್ಕು ಎಂದು ಪರಿಗಣಿಸಿ, ತಮಗೆ ಬೇಕಾದ ರಜೆ ಪಡೆದುಕೊಳ್ಳಲು ಮದಾಗುವಂತಿಲ್ಲ. ವಾರದ ರಜೆಯನ್ನು ಮುಂದಿನ ವಾರಕ್ಕೆ ಬಳಸಿಕೊಂಡು, ಒಂದೇ ಬಾರಿಗೆ ರಜೆ ಪಡೆಯಲು ಅವಕಾಶವಿಲ್ಲ ಎಂದು ಸುತ್ತೋಲೆಯಲ್ಲಿ ಷರತ್ತು ಹಾಕಲಾಗಿದೆ.
ಬಹುಮುಖ್ಯವಾಗಿ ವಾಟರ್ ಮ್ಯಾನ್ ಗಳು ಪ್ರಕೃತಿ ವಿಕೋಪ, ಸಭೆ ಸಮಾರಂಭಗಳ ಸಂದರ್ಭದಲ್ಲಿ, ಜಾತ್ರೆ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ವಾರದ ರಜೆಗೆ ಒತ್ತಾಯಿಸುವಂತಿಲ್ಲ. ಒಂದು ವೇಳೆ ಇಂತಹ ಸಂದರ್ಭಗಳಲ್ಲಿ ವಾರದ ರಜೆ ನೀಡುವುದು ಪಂಚಾಯಿತಿ ಅಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.


