ಅಪರಾಧ ಸಿನಿಮಾ ಸುದ್ದಿ

ರೇಣುಕಾ ಸ್ವಾಮಿ ಕೊಲೆ : ದರ್ಶನ್ ಸೇರಿ 17 ಆರೋಪಿಗಳು ಏನೇನು ಮಾಡಿದ್ರು ಗೊತ್ತಾ?

Share It

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳಿದ್ದಾರೆ. ಪ್ರತಿಯೊಬ್ಬ ಆರೋಪಿಯೂ
ರೇಣುಕಾಸ್ವಾಮಿ ಕೊಲೆಗಾಗಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾಗಿದ್ದಾರೆ ಎಂಬುದು ಪೊಲೀಸರ ಆರೋಪ. ರೇಣುಕಾ ಸ್ವಾಮಿ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳ ಮೇಲಿರುವ ಆರೋಪಗಳೇನು? ಪೊಲೀಸರ ಪ್ರಕಾರ, ಯಾವ ಆರೋಪಿ ಯಾವ ಕೃತ್ಯ ಎಸಗಿದ್ದಾನೆ? ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ…

A-1 ಆರೋಪಿ: ಪವಿತ್ರಾಗೌಡ: ಕೊಲೆ ಮಾಡಲು ಮೂಲ ವ್ಯಕ್ತಿ ಮತ್ತು ಹಲ್ಲೆ ನಡೆಸುವ ಸ್ಥಳದಲ್ಲಿ ಹಾಜರಿದ್ದರು. ಇವರೇ ಸ್ವತಃ ಮೃತ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿರುವ ಆರೋಪ.

A-2 ದರ್ಶನ್ ತೂಗುದೀಪ: ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿಸಿದ್ದು, ಹಲ್ಲೆ ಮಾಡಿರುವುದು, ಕೊಲೆ ಆದ ನಂತರ ಅದನ್ನು ಮುಚ್ಚಿಹಾಕಲು ಯತ್ನಿಸಿದ್ದು, ಸಾಕ್ಷ್ಯ ನಾಶದ ಯತ್ನ ಆರೋಪ.

A-3 ಪವನ್: ಪವಿತ್ರಾ ಗೌಡ ಜೊತೆಗಿದ್ದು, ರೇಣುಕಾ ಸ್ವಾಮಿಯ ಅಪಹರಣ ಮಾಡುವಾಗ ಮತ್ತೊಬ್ಬ ಆರೋಪಿ ರಾಘವೇಂದ್ರಗೆ ನೆರವು. ಶೆಡ್​ನಲ್ಲಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿರುವ ಆರೋಪ.

A-4 ರಾಘವೇಂದ್ರ: ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ, ರೇಣುಕಾ ಸ್ವಾಮಿ ಅಪಹರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಕೊಲೆಯಾದ ಸ್ಥಳದಲ್ಲಿ ಹಾಜರಿದ್ದ ಮತ್ತು ಪ್ರಕರಣ ಮುಚ್ಚಿಹಾಕಲು ಯತ್ನ.

A-5 ನಂದೀಶ: ರೇಣುಕಾ ಸ್ವಾಮಿಯ ಮೇಲೆ ತೀವ್ರವಾಗಿ ಹಲ್ಲೆ ಮಾಡಿರುವ ವ್ಯಕ್ತಿಗಳಲ್ಲಿ ಒಬ್ಬ. ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಿರುವ ಆರೋಪ.

A-6 ಜಗದೀಶ್ ಅಲಿಯಾಸ್ ಜಗ್ಗ: ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿಕೊಂಡು ಬೆಂಗಳೂರಿಗೆ ತಂದ ತಂಡದ ಸದಸ್ಯ, ಕೊಲೆಯಾದ ಸ್ಥಳದಲ್ಲಿದ್ದ, ಆ ಬಳಿಕ ನಾಪತ್ತೆಯಾಗಿದ್ದ.

A-7 ಅನುಕುಮಾರ್ ಅಲಿಯಾಸ್ ಅನು : ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿಕೊಂಡು ಚಿತ್ರದುರ್ಗದಿಂದ ಬಂದಿದ್ದ ತಂಡದ ಸದಸ್ಯ , ರೇಣುಕಾ ಸ್ವಾಮಿಯ ಸಾವಿನ ಬಳಿಕ ನಾಪತ್ತೆಯಾಗಿದ್ದ. ಈಗ ಬಂಧಿತ.

A-8 ರವಿ ಅಲಿಯಾಸ್ ರವಿಶಂಕರ್: ಕಾರು ಚಾಲಕ, ರೇಣುಕಾ ಸ್ವಾಮಿಯನ್ನು ಅಪಹರಿಸಿ ತಂದ ಕಾರಿನ ಚಾಲಕ. ಚಿತ್ರದುರ್ಗದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅಪ್ರೂವರ್ ಆಗಲು ನಿರಾಕರಿಸಿದ್ದ.

A9 ರಾಜು: ನಾಪತ್ತೆ, ಈತನ ಬಂಧನ ಆಗಬೇಕಿದೆ.

A-10 ವಿನಯ್ : 2ನೇ ಆರೋಪಿ ನಟ ದರ್ಶನ್ ಅವರ ಆಪ್ತ, ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲಿಕ, ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿರುವವರಲ್ಲಿ ಒಬ್ಬ. ಕೊಲೆಯ ಹೊಣೆಯನ್ನು ಬೇರೆಯವರ ಮೇಲೆ ಹೊರಿಸಿ, ಅವರಿಗೆ ಹಣ ನೀಡಿದ್ದ.

A-11 ನಾಗರಾಜು ಅಲಿಯಾಸ್ ನಾಗ: ನಟ ದರ್ಶನ್ ನ ಅನಧಿಕೃತ ಮ್ಯಾನೇಜರ್, ಪಾರ್ಟಿ ಕುಡಿತ ಸೇರಿ ಎಲ್ಲಾ ಕಡೆ ಇರ್ತಿದ್ದ, ಹಲ್ಲೆ ಮಾಡುವಾಗ ಜೊತೆಗೆ ಇದ್ದ, ರೇಣುಕಾ ಸ್ವಾಮಿ ಮೇಲೆ ತೀವ್ರ ಹಲ್ಲೆ ಮಾಡಿದವರಲ್ಲಿ ಒಬ್ಬ.

A-12 ಲಕ್ಷ್ಮಣ್: ದರ್ಶನ್ ಕಾರು ಚಾಲಕ, ಕೊಲೆ ಮಾಡುವಾಗ ಸ್ಥಳದಲ್ಲಿದ್ದು ಹಲ್ಲೆ ಮಾಡಿದ್ದ, ಮೃತ ದೇಹವನ್ನು ಎಸೆಯಲು ಬೇಕಾದ ವ್ಯವಸ್ಥೆ ಮಾಡಿದ್ದ ಆರೋಪ.

A-13 ದೀಪಕ್ : ದರ್ಶನ್ ಆಪ್ತನಾಗಿದ್ದ, ಹಲ್ಲೆ ಮಾಡಿದ್ದು ಬಳಿಕ ದರ್ಶನ್, ಪ್ರದೋಶ್ ಹೇಳಿದಂತೆ ಹಣವನ್ನು ಇತರೆ ಆರೋಪಿಗಳಾದ ನಿಖಿಲ್, ಕೇಶವಮೂರ್ತಿ ಮತ್ತು ಕಾರ್ತಿಕ್ ಗೆ ಹೇಳಿ ಒಪ್ಪಿಸಿ ತಲಾ 5 ಲಕ್ಷ ರೂ. ಹಣ ನೀಡಿದ್ದ.

A-14 ಪ್ರದೂಶ್: ದರ್ಶನ್ ಜೊತೆಗೆ ಇದ್ದುಕೊಂಡು ಹಲ್ಲೆ ಮಾಡಿದ್ದ, ನಂತರ ದರ್ಶನ್ ಜೊತೆಗೆ ವ್ಯವಹಾರ ನಡೆಸಿದ್ದ. ಕೊಲೆ ಮಾಡಿದ್ದವರ ಖರ್ಚಿಗಾಗಿ 30 ಲಕ್ಷ ರೂ‌. ಹಣವನ್ನು ಪಡೆದು ತಂದಿದ್ದ. ಇದಕ್ಕಾಗಿ ದೀಪಕ್ ಮೂಲಕ ವ್ಯವಹಾರ ಮಾಡಿಸಿದ್ದ. ಆರೋಪಿಗಳು ಭಯ ಪಟ್ಟಾಗ ಮತ್ತೆ ದರ್ಶನ್ ಭೇಟಿ ಮಾಡಿಸಿ ಪೊಲೀಸರಿಗೆ ಶರಣಾಗುವಂತೆ ಮಾಡಿಸಿದ್ದ.

A-15 ಕಾರ್ತಿಕ್ ಅಲಿಯಾಸ್ ಕಪ್ಪೆ: ಶೆಡ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕ, ದರ್ಶನ್ ತೂಗುದೀಪ ಹಾಗೂ ಆಪ್ತರು ಕೊಟ್ಟ ಹಣ ಪಡೆದು ರೇಣುಕಾಸ್ವಾಮಿಯ ಶವ ಸಾಗಿಸಿದ್ದ. ನಂತರ ಪೊಲೀಸರ ಮುಂದೆ ತಾನೇ ಕೊಲೆ ಮಾಡಿದ್ದಾಗಿ ಸುಳ್ಳು ಆರೋಪ ಹೊತ್ತು ಪೊಲೀಸರಿಗೆ ಶರಣಾಗಿದ್ದ.

A-16 ಕೇಶವಮೂರ್ತಿ: ಹಣ ಪಡೆದು ಮೃತ ದೇಹವನ್ನು ಕಾಮಾಕ್ಷಿಪಾಳ್ಯದ ರಾಜಕಾಲುವೆ ಬಳಿ ಹಾಕಿ, ರೇಣುಕಾ ಸ್ವಾಮಿಯನ್ನು ತಾನೇ ಕೊಂದಿದ್ದಾಗಿ ಹೇಳಿ ಪೊಲೀಸರ ಮುಂದೆ ಶರಣಾಗಿದ್ದ.

A-17 ನಿಖಿಲ್: ನಟ ದರ್ಶನ್ ಕೊಟ್ಟ ಹಣ ಪಡೆದುಕೊಂಡು ರೇಣುಕಾಸ್ವಾಮಿಯ ಮೃತದೇಹ ಸಾಗಿಸಿದ್ದ, ಬಳಿಕ ಪೊಲೀಸರ ಮುಂದೆ ರೇಣುಕಾಸ್ವಾಮಿ ಕೊಲೆ ಮಾಡಿದ್ದಾಗಿ ಸುಳ್ಳು ಆರೋಪ ಹೊತ್ತುಕೊಂಡ.

ಆದರೆ ಈ 17 ಆರೋಪಿಗಳ ಮೇಲಿನ ದೋಷಾರೋಪಣೆಗಳು ಇನ್ನೂ ಕೋರ್ಟ್ ಮುಂದೆ ಸಾಬೀತಾಗಬೇಕಿದೆ. ಹಾಗಾದಲ್ಲಿ ಮಾತ್ರ ರೇಣುಕಾಸ್ವಾಮಿ ಕೊಲೆ ಮಾಡಿದ್ದು ಯಾರು? ಎಂಬ ಅಸಲಿ ಸತ್ಯ ಬಟಾಬಯಲಿಗೆ ಬರಲಿದೆ.


Share It

You cannot copy content of this page