ನಟ ಅಜಯ್ ರಾವ್ ಗೆ ಕೊನೆ ಸಂದೇಶ ಕಳುಹಿಸಿದ್ದ ಸೌಂದರ್ಯ ಜಗದೀಶ್ ಹೇಳಿದ್ದೇನು?
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಶಂಕಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿತ್ತು. ಇನ್ನು ನಿರ್ಮಾಪಕನ ಸಾವಿಗೆ ಚಿತ್ರರಂಗ ಕಂಬನಿ ಮುಡಿದಿದೆ.
ಸ್ಯಾಂಡಲ್‌ವುಡ್ ಗಣ್ಯರು ಜಗದೀಶ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇನ್ನು ಕೈನೋವಿದ್ದರೂ ನಟ ದರ್ಶನ್ ಆಪ್ತ ಸ್ನೇಹಿತ ಸೌಂದರ್ಯ ಜಗದೀಶ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಇದೇ ರೀತಿ ನಟ-ನಿರ್ದೇಶಕ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ನಟಿ ಅಮೂಲ್ಯ, ನಟರಾದ ಶ್ರೀನಗರ ಕಿಟ್ಟಿ, ವಿನೋದ್ ಪ್ರಭಾಕರ್, ಲವ್ಲಿ ಸ್ಟಾರ್ ಪ್ರೇಮ್, ಸಂಗೀತ ನಿರ್ದೇಶಕ ಗುರುಕಿರಣ್ ದಂಪತಿ, ನಟ ಗುರುನಂದನ್ ಸೇರಿದಂತೆ ಅನೇಕರು ಸೌಂದರ್ಯ ಜಗದೀಶ್‌ಗೆ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮತ್ತೊಂದೆಡೆ ನಟ ಅಜೇಯ ರಾವ್ ಅವರ ಮನೆ ಗೃಹ ಪ್ರವೇಶ ಸಮಾರಂಭ ಇಂದು ನಡೆಯಿತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅಜೇಯ್ ರಾವ್ ಸೌಂದರ್ಯ ಜಗದೀಶ್ ನನಗೆ ಆತ್ಮೀಯ ಸ್ನೇಹಿತರಾಗಿದ್ದರು. ನಾನು ಅವರಿಗೆ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಆದರೆ ಇಂದು ಕೆಟ್ಟ ಸುದ್ದಿ ಕೇಳಬೇಕಾಯಿತು. ಮೂರು ದಿನಗಳ ಹಿಂದೆ ನನಗೆ ಮೇಸೆಜ್ ಮಾಡಿದ್ದರು. ದೇವರು ಒಳ್ಳೆದು ಮಾಡಲಿ, ನಾನು ಗೃಹ ಪ್ರವೇಶಕ್ಕೆ ಬರುತ್ತೀನಿ ಅಂತ ಮೆಸೇಜ್ ಮಾಡಿದ್ದರು. ಆದರೆ ಈ ಸುದ್ದಿ ಕೇಳಿ ತುಂಬಾ ಶಾಕ್ ಆಯಿತು ಎಂದು ಅಜೇಯ್ ರಾವ್ ಹೇಳಿದ್ದಾರೆ.
ಏ.15ರಂದು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ ನಡೆಯಲಿದೆ.