ಬೆಂಗಳೂರು: ಭಾರತೀಯ ಕ್ರಿಕೆಟ್ ನ ಇವತ್ತಿನ ಉತ್ತುಂಗ ಸ್ಥಿತಿಗೆ ಸೌರವ್ ಗಂಗೂಲಿ ಕೊಡುಗೆಯನ್ನು ಮರೆಯುವಂತಿಲ್ಲ. ಅದರಲ್ಲೂ ಅವರ ಅಗ್ರೇಷನ್ ಭಾರತೀಯ ಕ್ರಿಕೆಟ್ ತಂಡವನ್ನು ಎದುರಾಳಿಗಳ ಮುಂದೆ ಮಾನಸಿಕ ಗಟ್ಟಿತನಕ್ಕೆ ಕಾರಣವಾಯಿತು.
ಇದಕ್ಕೊಂದು ಸ್ಪಷ್ಟ ಉದಾಹರಣೆ ಇಂಗ್ಲೆಂಡ್ ನೆಲದಲ್ಲಿ ನ್ಯಾಟ್ ವೆಸ್ಟ್ ತ್ರಿಕೋನ ಸರಣಿ ಗೆದ್ದ ಸಂದರ್ಭದಲ್ಲಿ ಶರ್ಟ್ ಬಿಚ್ಚಿ, ಮೇಲೆಸೆದು ಲಾರ್ಡ್ಸ್ ಮೈದಾನದಲ್ಲಿ ನಿಂತು ಸಂಭ್ರಮಿಸಿದ್ದು ಇಂದಿಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆಯಲಾರದ ಕ್ಷಣ.
ಅಷ್ಟಕ್ಕೂ, ಅಂದು ಗಂಗೂಲಿಯ ಅಂತಹ ಅಗ್ರೇಸೀವ್ ವರ್ತನೆಗೆ ಕಾರಣವೇನು? ಎಂದರೆ, ಆರು ತಿಂಗಳ ಹಿಂದಿನ ಸೇಡು ಕಣ್ಮುಂದೆ ಬರುತ್ತದೆ. ಇಂಗ್ಲೆಂಡ್ ಭಾರತ ಪ್ರವಾಸದಲ್ಲಿ ಆರು ಪಂದ್ಯಗಳ ಸರಣಿ ಆಡಿತ್ತು. ಭಾರತ ಮೂರು ಪಂದ್ಯ ಗೆದ್ದಿತ್ತು. ಇಂಗ್ಲೆಂಡ್, ಎರಡು ಪಂದ್ಯ ಗೆದ್ದು, ಕೊನೆಯ ಪಂದ್ಯ ಮುಂಬಯಿ ವಾಂಖೆಡೆ ಮೈದಾನದಲ್ಲಿ ನಡೆದಿತ್ತು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, 255 ರನ್ ಗಳ ಗುರಿಯನ್ನು ಭಾರತಕ್ಕೆ ನೀಡಿತ್ತು. ಅಂದಿನ ಪಂದ್ಯದಲ್ಲಿ ಅಬ್ಬರಿಸಿದ ಸೌರವ್ ಗಂಗೂಲಿ, 80 ರನ್ ಗಳಿಸಿದ್ದರು. ಗೆಲುವಿನ ಸಮೀಪಕ್ಕೆ ಬಂದು ಭಾರತ ಮುಗ್ಗರಿಸಿತು. ಕೊನೆಯ ಓವರ್ ನಲ್ಲಿ ಹನ್ನೊಂದು ರನ್ ಬೇಕಿದ್ದಾಗ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಬೌಲ್ಡ್ ಮಾಡಿದ ಆಂಡ್ರ್ಯೂ ಫ್ಲಿಂಟಾಪ್ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು.
ಗಡ್ಔಟ್ ನಲ್ಲಿ ಕುಳಿತಿದ್ದ ಸೌರವ್ ಗಂಗೂಲಿ, ತಾವು ಕುಳಿತಿದ್ದ ಪ್ಲಾಸ್ಟಿಕ್ ಚೇರ್ ಗೆ ಒದ್ದು ಮುರಿದು ಸಿಟ್ಟು ಹೊರಹಾಕಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ್ದರು. ಸೇಡಿಗೆ ಹೆಸರದಾದ ದಾದ ಅದನ್ನೇ ಕಾಯ್ದು ನಾಟ್ ವೆಸ್ಟ್ ಸೀರೀಸ್ ಗೆದ್ದು ಅಂಗಿ ಕಳಚಿ ಭ್ರಮಿಸಿದ್ದರು.
ಶ್ರೀಲಂಕಾ, ಇಂಗ್ಲೆಂಡ್ ಮತ್ತು ಭಾರತ ಭಾಗವಹಿಸಿದ್ದ ತ್ರಿಕೋನ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ಫೈನಲ್ ತಲುಪಿದ್ದವು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಐವತ್ತು ಓವರ್ ಗಳಲ್ಲಿ 325 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಭಾರತ 46 ರನ್ ಗಳಿಗೆ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡಿತ್ತು.
ಯುವರಾಜ್ ಸಿಂಗ್ ಮತ್ತು ಮಹಮದ್ ಕೈಫ್ ಜತೆಯಾಗಿ ಕೊನೆಯವರೆಗೆ ನಿಂತು ಪಂದ್ಯವನ್ನು ಭಾರತದ ಕೇ ವಾಲಿಸಿದರು. ಕೊನೆಯ ಓವರ್ ನಲ್ಲಿ ಜಹೀರ್ ಖಾನ್ ಮತ್ತು ಕೈಪ್ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು. ಅಂದಿಗೆ ಆ ಸ್ಕೋರ್ ದಾಖಲೆಯ ಚೇಸಿಂಗ್ ಆಗಿತ್ತು.
ಗೆಲುವು ಸಿಗುತ್ತಿದ್ದಂತೆ ಲಾರ್ಡ್ಸ್ ಪೆವಿಲಿಯನ್ ನಲ್ಲಿ ಕುಳಿತಿದ್ದ ನಾಯಕ ಗಂಗೂಲಿ ಫ್ಲಿಂಟಾಫ್ ಮಾದರಿಯಲ್ಲಿಯೇ ಶರ್ಟ್ ಬಿಚ್ಚಿ, ಭ್ರಮಿಸುವ ಮೂಲಕ ಮುಂಬಯಿಯಲ್ಲಿ ಆದ ಅವಮಾನಕ್ಕೆ ಸೇಡು ತೀರಿಸಿಕೊಂಡರು. ಈ ಸಂಭ್ರಮಾಚರಣೆ ಭಾರತೀಯ ಕ್ರಿಕೆಟ್ ಪಾಲಿಗೆ ಐಕಾನಿಕ್ ಆಗಿಯೇ ಉಳಿದಿದೆ.