ಬೆಂಗಳೂರು: ಮಾತೆತ್ತಿದರೆ, ಯತ್ರ ನರ‍್ಯಂತು ತತ್ರ ರಮಂತೆ ಎಂಬ ಮಂತ್ರ ಪಠಿಸುವ, ಇಡೀ ಜಗತ್ತಿನಲ್ಲಿಯೇ ಮಹಿಳೆಯನ್ನು ದೇವರೆಂದು ಪೂಜಿಸುವ ಪಕ್ಷ ಪ್ರಜ್ವಲ್ ರೇವಣ್ಣ ಅವರಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರ ವಿಚಾರದಲ್ಲಿ ಇನ್ನೂ ಮೌನವಾಗಿದೆಯಲ್ಲಾ ಏಕೆ?
ಪ್ರಜ್ವಲ್ ಲೈಂಕಿಗ ಪ್ರಕರಣದ ಆರೋಪಿ, ಅವರ ಮೇಲೆ ಮೂರು ಪ್ರಕರಣ ದಾಖಲಾಗಿದೆ. ಅವರು ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದರು. ಇದೀಗ ಎಸ್‌ಐಟಿ ಬಂಧನ ಮಾಡಿದೆ. ಅವರು ಜೆಡಿಎಸ್ ಸಂಸದರು, ದೇವೇಗೌಡರ ಮೊಮ್ಮಗ, ದೇವೇಗೌಡರು, ಜೆಡಿಎಸ್‌ನ ರಾಷ್ಟೀಯ ಅಧ್ಯಕ್ಷರು, ಜೆಡಿಎಸ್, ಇತ್ತೀಚೆಗೆ ಎನ್‌ಡಿಎ ಮೈತ್ರಿ ಕೂಟ ಸೇರಿದ ಪಕ್ಷ. ಬಿಜೆಪಿ ಎನ್‌ಡಿಎ ಮುಂದಾಳತ್ವ ವಹಿಸಿರುವ ಪಕ್ಷ. ಈ ಮೇಲಿನ ಸಂಕೋಲೆಯೇ ಬಿಜೆಪಿ ನಾಯಕರು ಮೌನವಾಗಿರುವಂತೆ ಮಾಡಿದೆಯಾ>
ಹಾಸನದಲ್ಲಿ ನಡೆದ ಹೋರಾಟದಲ್ಲಿ ಎಲ್ಲರದ್ದು ಒಂದೇ ಪ್ರಶ್ನೆ. ಬಿಜೆಪಿ ನಾರಿಯರನ್ನು ಪೂಜಿಸುವ ಪಕ್ಷ ಎನ್ನುತ್ತದೆ. ಆದರೆ, ಈ ಬಗ್ಗೆ ಯಾರೂ ಮಾತಾಡಿಲ್ಲ ಯಾಕೆ ಎನ್ನುತ್ತಾರೆ. ಮೊದಮೊದಲು ಸೈಲೆಂಟಾಗಿದ್ದ ನಾಯಕರು, ಆಮೇಲೆ ಇದೊಂದು ಘೋರ ಕೃತ್ಯ ಎನ್ನುತ್ತಾರೆ. ಆದರೆ, ಅಷ್ಟಕ್ಕೆ ಸುಮ್ಮನಾಗುತ್ತಾರೆ. ಬೇರೆ ಪ್ರಕರಣದಲ್ಲಿ ಮಾಡುವ ಹೋರಾಟದ ಹುಮ್ಮಸ್ಸು ಇಲ್ಲಿ ಕಾಣುವುದಿಲ್ಲ.
ಬಿಜೆಪಿಯ ಕೆಲವು ನಾಯಕರು ಇದೊಂದು ರಾಜಕೀಯ ಷಡ್ಯಂತ್ರ, ದೇವೇಗೌಡರ ಕುಟುಂಬವನ್ನು ನಾಶ ಮಾಡಲು ಒಕ್ಕಲಿಗ ನಾಯಕನೊಬ್ಬ ಹೂಡಿರುವ ಸಂಚು ಎನ್ನುತ್ತಾರೆ. ಅದೇ ಸಮಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಪ್ರಜ್ವಲ್ ಪ್ರಕರಣ ಮನಸ್ಸಿಗೆ ಹೇಸಿಗೆ ಹುಟ್ಟಿಸುವಂತಹ ಘಟನೆ, ಮಹಿಳೆಯರಿಗೆ ಪ್ರಜ್ವಲ್ ಮಾಡಿರುವ ದೌರ್ಜನ್ಯ ದೊಡ್ಡಮಟ್ಟದ್ದು, ಅವರಿಗೆ ದೊಡ್ಡಮಟ್ಟದ ಶಿಕ್ಷೆಯಾಗಬೇಕು ಎಂದು ಹೇಳಿಕೆ ನೀಡುತ್ತಾರೆ.
ಆರ್.ಅಶೋಕ್ ಪ್ರಜ್ವಲ್ ಪ್ರಕರಣದಲ್ಲಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ, ಗೌಡರ ಕುಟುಂಬವನ್ನು ಹಣಿಯಲು ಇದೆಲ್ಲ ನಡೆಯುತ್ತಿದೆ ಎನ್ನುತ್ತಾರೆ. ಯತ್ನಾಳ್, ಇದು ಗೌಡರ ಕುಟುಂಬದ ವಿರುದ್ಧದ ಪಿತೂರಿ ಎನ್ನುತ್ತಾರೆ.
ಹಾಗಾದರೆ, ಆ ವಿಡಿಯೋದಲ್ಲಿರುವ ಮಹಿಳೆಯರೆಲ್ಲ ಯಾರು? ಯಾಕಾಗಿ, ಆ ವಿಡಿಯೋಗಳೆಲ್ಲ ಹೊರಬಂದವು,? ಆ ವಿಡಿಯೋಗಳನ್ನೆಲ್ಲ ಮಾಡಿಕೊಂಡಿದ್ದು ಯಾರು? ಇಂತಹ ವಿಡಿಯೋ ಬಿಡುಗಡೆ ಮಾಡಂತೆ ಪ್ರಜ್ವಲ್ ಮೊದಲೇ ತಡೆಯಾಜ್ಞೆ ಪಡೆದುಕೊಂಡಿದ್ದು ಯಾಕೆ? ಇವೆಲ್ಲ ಪ್ರಶ್ನೆಗಳು ಸಾಮಾನ್ಯ ಜನಕ್ಕೆ ಅರ್ಥವಾಗುತ್ತಿವೆ. ಆದರೆಎ, ಬಿಜೆಪಿ ನಾಯಕರಿಗೆ ಅರ್ಥವಾದಂತಿಲ್ಲ, ಅಥವಾ ಅರ್ಥವಾಗಿದ್ದರೂ, ಮೈತ್ರಿ ಪಕ್ಷದ ಮೇಲೆ ವ್ಯಾಮೋಹದಿಂದ ಸುಮ್ಮನಿದ್ದಾರಾ ಎಂಬೆಲ್ಲ ಪ್ರಶ್ನೆಗಳು ಮೂಡುವುದು ಸಹಜ.
ಮೈತ್ರಿ ಪಕ್ಷವೇ ಆಗಲೀ, ಹೆಣ್ಣಿನ ವಿರುದ್ಧದ ದೌರ್ಜನ್ಯದ ವಿಚಾರ ಬಂದಾಗ ಒಂದು ಕಡೆ ನಿಲ್ಲಬೇಕಾದ, ನೊಂದವರ ಪರ ನಿಲ್ಲಬೇಕಾದ ಒಂದು ರಾಜಕೀಯ ಪಕ್ಷ ಒಂದು ಕುಟುಂಬದ ಜತೆಗೆ ನಿಂತಾಗ ಸಹಜವಾಗಿಯೇ ನಾಡಿನ ಜನ ಅವರ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಬಹುತೇಕ ಎಷ್ಟೋ ಬಿಜೆಪಿ ಕಾರ್ಯಕರ್ತರೇ, ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ ನಿಲುವಿನ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕೇಂದ್ರ ನಾಯಕರು, ರಾಜ್ಯ ನಾಯಕರು ಒಂದು ಕಡೆ ಕುಳಿತು, ಪ್ರಜ್ವಲ್ ಪ್ರಕರಣದಲ್ಲಿ ನಮ್ಮ ನಿಲುವು ಏನಾಗಿರಬೇಕು ಎಂಬುದನ್ನು ಸ್ಪಷ್ಟವಾಗಿ ಚರ್ಚೆ ನಡೆಸಿ, ಇಲ್ಲ ಪ್ರಜ್ವಲ್ ಪರವಾಗಿಯೇ ನಿಲ್ಲಲಿ, ನಾಡಿನ ಜನರನ್ನು ಎದುರಿಸಲಿ, ಇಲ್ಲವಾದಲ್ಲಿ, ನೊಂದವರ ಪರ ನಿಲ್ಲಲ್ಲಿ, ಅವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಿ, ಅದನ್ನು ಬಿಟ್ಟು, ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದರೆ, ಹೆಣ್ಣುಗಳ ವಿಚಾರದಲ್ಲಿ ಸುಸಂಸ್ಕೃತ ಭಾರತೀಯ ಪಕ್ಷದ ನಿಲುವೇನು ಎಂಬ ಗೊಂದಲ ಮಹಿಳೆಯರನ್ನು ಕಾಡುತ್ತದೆ.
