ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾ ಗುತ್ತಿದ್ದರೂ, ರಾಜ್ಯಾದ್ಯಂತ ಕಳೆದೊಂದು ವರ್ಷದಲ್ಲಿ ರೈತರು ಅನುಭವಿಸಿದ ಬರದ ನೋವಿಗೆ ಸರಕಾರ ಅತ್ಯಧಿಕ ಮೊತ್ತದ ಪರಿಹಾರ ನೀಡಿದೆ.
ರಾಜ್ಯದಲ್ಲಿ ಈವರೆಗೆ 38,78,525 ರೈತರಿಗೆ ಬರ ಪರಿಹಾರ ನೀಡುವ ಮೂಲಕ ರಾಜ್ಯ ಸರಕಾರ ಹೊಸ ದಾಖಲೆ ಬರೆದಿದೆ. ಬರ ಪರಿಹಾರ ಕೆಲಸಕ್ಕೆ ಈವರೆಗೆ ರೂ. 4047 ಕೋಟಿ ಖರ್ಚು ಮಾಡಿರುವ ರಾಜ್ಯ ಸರಕಾರ ರಾಜ್ಯದ ಬೊಕ್ಕಸದಿಂದ 1296 ಕೋಟಿ ಖರ್ಚು ಮಾಡಿದೆ ಎಂಬ ಅಂಕಿ- ಅಂಶ ಲಭ್ಯವಾಗಿದೆ.
ಈವರೆಗೆ ಯಾವುದೇ ವರ್ಷ ಸರಕಾರ ನೀಡಿದ ವಾರ್ಷಿಕ ಪರಿಹಾರ ಮೊತ್ತ ಇಷ್ಟೊಂದು ಗಣನೀಯವಾಗಿರಲಿಲ್ಲ. ಈವರೆಗೆ 23,42,667 ಕೋಟಿ ನೀಡಿದ್ದೇ ದಾಖಲೆಯಾಗಿತ್ತು. ಆದರೆ, 2023-24ರ ಸಾಲಿನಲ್ಲಿ ಅತಿಹೆಚ್ಚು ರೈತರಿಗೆ ಬರ ಪರಿಹಾರ ನೀಡಲಾಗಿದೆ ಎಂದು ಸರಕಾರ ಅಧಿಕೃತ ಮಾಹಿತಿ ನೀಡಿದೆ.
ಹಿಂದಿನ ಸರ್ಕಾರದ ನಾಲ್ಕು ವರ್ಷದ ಅವಧಿಯಲ್ಲಿ ನೀಡಿದ್ದು, 14,41,049 ರೈತರಿಗೆ ಪರಿಹಾರ ನೀಡಿದ್ದೇ ದೊಡ್ಡದಾಗಿತ್ತು. ಈ ನಡುವೆ ರಾಜ್ಯ ಸರಕಾರ, ರಾಜ್ಯಾದ್ಯಂತ 17,80,000 ರೈತ ಕುಟುಂಬಗಳನ್ನು ಗುರುತಿಸಿ, ಜೀವನೋಪಾಯ ನಷ್ಟಕ್ಕೆ ಹಣ ಪಾವತಿ ಮಾಡುವ ಕೆಲಸ ಚಾಲ್ತಿಯಲ್ಲಿದೆ. ಇದಕ್ಕಾಗಿ 531ಕೋಟಿ ರೂಪಾಯಿಯನ್ನು ತೆಗೆದಿರಿಸಲಾಗಿದೆ.
“ಬರ ಪರಿಹಾರಕ್ಕಾಗಿ ರಾಜ್ಯದಿಂದ ಒಟ್ಟು 1296 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇದರಲ್ಲಿ ರೈತರಿಗೆ ಪರಿಹಾರ ನೀಡುವ ಜತೆಗೆ ಮೇವು, ಕುಡಿಯುವ ನೀರಿಗೆ 85 ಕೋಟಿ ರೂ. ಅಲ್ಲದೆ, ದೀರ್ಘಾವಧಿ ಬರ ಪರಿಹಾರ ಕಾಮಗಾರಿಗೆ 200 ಕೋಟಿ ರೂ. ನೀಡಲಾಗಿದೆ. ಇನ್ನೂ ಹಣ ಖರ್ಚಾಗುವಂತದ್ದಿದ್ದು, ರಾಜ್ಯ ಸರ್ಕಾರ ಏನು ಸಾಧ್ಯವೋ ಅದೆಲ್ಲ ಮಾಡುತ್ತಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.