ಬೆಂಗಳೂರಿನ ಭಯಾನಕ ಟ್ರಾಫಿಕ್ ನಲ್ಲಿ ವ್ಯಕ್ತಿಯೊಬ್ಬ ತಾನು ಸೇರಬೇಕಾದ ಸ್ಥಳಕ್ಕೆ ಸೇರಲು ಅವಸರದಿಂದ ಸಾಗುತ್ತಿದ್ದಾನೆ. ಆದರೆ, ಅದು ಅಷ್ಟು ಸಲಭದ ಮಾತೇ? ಪ್ರಾಣ ಕಳೆದುಕೊಳ್ಳುವ ಹಂತದಲ್ಲಿರುವ ಅಂಬ್ಯುಲೆನ್ಸ್ ಬಂದರೂ ದಾರಿ ಬಿಡದ ನಮ್ಮ ಮಹಾನಗರದ ಜನ, ಗುರಿ ತಲುಪುವ ಧಾವಂತದಲ್ಲಿ ಓಡುವ ವ್ಯಕ್ತಿಯೊಬ್ಬನಿಗೆ ದಾರಿ ಬಿಟ್ಟುಬಕೊಡುತ್ತಾರಾ? ನೋ ವೇ….ಚಾನ್ಸೇ ಇಲ್ಲ.
ಹೀಗೆ ಸಾಗುವ ದಾರಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಮತ್ತಷ್ಟು ಕಿರಿಕಿರಿ ಕೊಡುತ್ತವೆ. ಅದೇಗೋ ಅವೆಲ್ಲವನ್ನೂ ತಪ್ಪಿಸಿಕೊಂಡು ಒಂದು ಹಂತಕ್ಕೆ ಮುಂದೆ ಸಾಗುತ್ತಿದ್ದಂತೆ ದೊಡ್ಡ ಕಸದ ಲಾರಿಯೊಂದು ಅಡ್ಡ ಬಂದಿದೆ. ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ, ಬೈಯ್ಯುತ್ತಾ ಲಾರಿಯನ್ನು ಓವರ್ ಟೇಕ್ ಮಾಡುವ ಪ್ರಯತ್ನ ಮಾಡ್ತಾನೆ. ನೋ ವೇ ಚಾನ್ಸೇ ಇಲ್ಲ..ಲಾರಿ ನಿಮಗಷ್ಟು ಸುಲಭವಾಗಿ ದಾರಿ ಬಿಡೋದೆ ಇಲ್ಲ….
ಸುಮಾರು ದೂರ ಲಾರಿಯ ಹಿಂದೆಯೇ ಹೋಗುತ್ತಿದ್ದಾನೆ ಆ ವ್ಯಕ್ತಿ. ಭಯಾನಕ ಕಿರಿಕಿರಿ ಆಗ್ತಿದೆ. ಕೊಳೆತ ಕಸದ ವಾಸನೆ ಆತನಲ್ಲಿ ಅಸಹನೀಯ ಅನುಭವವನ್ನು ತರಿಸುತ್ತಿದೆ. ಮನಸ್ಸೊಳಗೆ ಬೈದು ಕೊಂಡು, ಓವರ್ ಟೇಕ್ ಮಾಡಲು ಎಕ್ಸ್ಲೇಟರ್ ಕೊಡ್ತಾನೆ, ಮತ್ತದೆ ಸಂದಿ ಗೊಂದಿಯ ಮೂಲಕ ಸಿಲುಕಿ, ಅದೇ ಲಾರಿಯ ಬದಿಗೆ ಬಂದೇ ನಿಲ್ತಾನೆ.
ಕಸದ ಲಾರಿಯ ಕಿರಿಕಿರಿ ಹೆಚ್ಚಾಗುತ್ತಿದ್ದಂತೆ, ಈ ರಸ್ತೆ ಯ ಸಹವಾಸವೇ ಬೇಡ ಎಂದು ಕೊಂಡ ಆತ, ತನಗೆ ಗೊತ್ತಿದ್ದ ಶಾರ್ಟ್ ಕಟ್ ಅಡ್ಡರಸ್ತೆ ಹಿಡಿಯುತ್ತಾನೆ. ಅಲ್ಲಿ ಬೈಕ್ ನುಗ್ಗಿಸಿಕೊಂಡು ಹೊರಟು, ಹಾಗೂ ಹೀಗೂ ಮಾಡಿ, ಮುಂದೆ ಸಾಗ್ತಾನೆ. ಆ ರಸ್ತೆಯೇನೂ ಮೈಸೂರು ಮಹರಾಜರು ನಿರ್ಮಿಸಿದ ರಸ್ತೆಯಾ, ಅಲ್ಲಿಯೂ ಒಂದಷ್ಟು ಅಡ್ಡಿ ಆತಂಕಗಳು, ಅಡ್ಡ ನಿಂತ ಆಟೋಗಳು, ಓಡಿ ಬರುವ ಮಕ್ಕಳುಗಳು ಹೀಗೆ ಹೇಗೋ ಮಾಡಿ, ಮರಳಿ ಮೈನ್ ರೋಡ್ ತಲುಪಿಕೊಳ್ತಾನೆ.
ಅಬ್ಬ ಮತ್ತೇ ನಾ ಹೋಗಬೇಕಾದ ರಸ್ತೆಗೆ ಸೇರಿದೆ ಎಂದು ಖುಷಿಯಿಂದ ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ, ಎಲ್ಲಿಂದಲೋ ಗಪ್ಪನೆ ಕಸದ ಗಬ್ಬುವಾಸನೆ ಮೂಗಿಗೆ ಬಡಿಯುತ್ತದೆ. ತಲೆಯೆತ್ತಿ ನೋಡಿದರೆ, ಈತನಿಗೆ ಕಿರಿಕಿರಿ ಕೊಡುವ ಕಸದ ಗಾಡಿ, ಟ್ರಾಫಿಕ್ ನಲ್ಲಿ ಈತನ ಮುಂದೆಯೇ ನಿಂತಿದೆ. ಮತ್ತೇನೂ ಮಾಡಲಾರದ ಆತ ಸಿಗ್ನಲ್ ಬಿಡುವವರೆಗೆ ಸಹಿಸಿಕೊಂಡು ನಿಲ್ಲುತ್ತಾನೆ.
ಸಿಗ್ನಲ್ ಬಿಡುತ್ತಿದ್ದಂತೆ ಅಪಾಯದಿಂದ ಲಾರಿಯ ಪಕ್ಕಕ್ಕೆ ತೆರಳಿದ ಆತ ಹಾಗೋ ಹೀಗೋ ಮಾಡಿ, ಲಾರಿಯನ್ನು ಸೇಡ್ ಹೊಡೆದು, ರೋಡಿಗಿಳಿಯುತ್ತಾನೆ. ಸರ್ರನೆ ಸರಾಗವಾಗಿ ತಲುಪಿ ಆತ ತಲುಪಬೇಕಾದ ಹಾದಿ ಅನತಿ ದೂರದಲ್ಲಿ ಕಾಣುತ್ತದೆ. ಖುಷಿಯಿಂದ ಕೂಗುಹಾಕಿ, ಗೆಲುವಿನ ಕೇಕೆ ಹಾಕ್ತಾನೆ. ಗೆದ್ದ ಖುಷಿಯನ್ನು ಸಂಭ್ರಮಿಸ್ತಾನೆ.
ನಿತ್ಯ ನಾವೆಲ್ಲ ಅನುಭವಿಸೋ ಯಾತನೆ ಇದು. ಇದು ಓಂದ್ ಕತೇನಾ ಅಂದೊಕೊಳ್ಳಬೇಡಿ. ಇದು ಕತೆಯಲ್ಲ, ಜೀವನ. ನಮ್ಮ ನಿತ್ಯ ಜೀವನದಲ್ಲಿ ನಾವು ಗುರಿಯೆಡೆಗೆ ಓಡುವ ಧಾವಂತದಲ್ಲಿ ನಮಗೆ ಇಂತಹ ಅನೇಕ ಬಿಕ್ಕಟ್ಟು ಎದುರಾಗ್ತವೆ. ನಾವದಕ್ಕೆ ಬದಲಿ ಮಾರ್ಗ ಆಯ್ಕೆ ಮಾಡುವುದನ್ನು ಬಿಟ್ಟು, ಇರುವ ದಾರಿಯಲ್ಲೇ ಒಂದಷ್ಟು ನೋವುಂಡು, ಸಹಿಸಿಕೊಂಡು ಜಾಣ್ಮೆ, ಸಹನೆ, ಸಂಯಮ, ಸಮಯಪ್ರಜ್ಞೆಯ ಮೂಲಕ ಗೆದ್ದುಬಿಟ್ಟರೆ, ಮುಗಿಯಿತು. ಮುಂದಿನ ರಹದಾರಿ ನಮ್ಮದೆ !