ಸಿನಿಮಾ ಸುದ್ದಿ

ಜನ ನಾಯಗನ್’ ಸಿನಿಮಾದಲ್ಲಿ ಯಾರಿಗೆ ಎಷ್ಟು ಸಂಭಾವನೆ? ವಿಜಯ್‌ ರಿಂದ ಸಹ ಕಲಾವಿದರ ತನಕ ಸಂಪೂರ್ಣ ವಿವರ

Share It

ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರವೆಂದು ಹೇಳಲಾಗುತ್ತಿರುವ ‘ಜನ ನಾಯಗನ್’ ಮೊದಲಿಗೆ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ನಟಿಸಿದ ಕಲಾವಿದರು ಹಾಗೂ ತಾಂತ್ರಿಕ ತಂಡಕ್ಕೆ ನೀಡಲಾಗಿರುವ ಸಂಭಾವನೆ ಕುರಿತಾಗಿ ಈಗ ಹಲವು ವರದಿಗಳು ಹೊರಬಿದ್ದಿವೆ. ಅವುಗಳ ವಿವರ ಇಲ್ಲಿದೆ.

ದಳಪತಿ ವಿಜಯ್:
ಚಿತ್ರ ಆರಂಭದ ವೇಳೆ ವಿಜಯ್ ಅವರಿಗೆ ₹251 ಕೋಟಿ ನೀಡುವ ಬಗ್ಗೆ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಆದರೆ ಅಂತಿಮವಾಗಿ ₹220 ಕೋಟಿ ಸಂಭಾವನೆ ಪಾವತಿಸಲಾಗಿದೆ ಎಂಬ ಮಾಹಿತಿ ಇದೆ. ಇದರ ಜೊತೆಗೆ, ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ₹1000 ಕೋಟಿ ಗಡಿ ದಾಟಿದರೆ, ಹೆಚ್ಚುವರಿಯಾಗಿ ₹31 ಕೋಟಿ ಬೋನಸ್ ನೀಡುವ ಒಪ್ಪಂದವೂ ಇದ್ದುದಾಗಿ ವರದಿಯಾಗಿದೆ.

ನಿರ್ದೇಶಕ ಎಚ್. ವಿನೋದ್:
ತಮ್ಮ ವಿಭಿನ್ನ ಕಥನ ಶೈಲಿಗೆ ಹೆಸರುವಾಸಿಯಾದ ನಿರ್ದೇಶಕ ಎಚ್. ವಿನೋದ್ ಅವರು ಈ ಸಿನಿಮಾಕ್ಕೆ ₹25 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್:
‘ಜನ ನಾಯಗನ್’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ ಅನಿರುದ್ಧ ರವಿಚಂದರ್ ಅವರಿಗೆ ಸುಮಾರು ₹13 ಕೋಟಿ ನೀಡಲಾಗಿದೆ ಎಂದು ವರದಿಯಾಗಿದೆ.

ಬಾಬಿ ಡಿಯೋಲ್:
ಚಿತ್ರದಲ್ಲಿ ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ಬಾಬಿ ಡಿಯೋಲ್ ಅವರು ಸುಮಾರು ₹45 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಪೂಜಾ ಹೆಗ್ಡೆ:
‘ಬೀಸ್ಟ್’ ಚಿತ್ರದ ಯಶಸ್ಸಿನ ಬಳಿಕ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ನಾಯಕಿ ಪಾತ್ರಕ್ಕಾಗಿ ₹3 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಮಮಿತಾ ಬೈಜು:
ವಿಜಯ್ ಅವರ ದತ್ತು ಪುತ್ರ ವಿಜಿ ಶ್ರೀಕಾಂತ್ ಪಾತ್ರದಲ್ಲಿ ನಟಿಸಿರುವ ಮಮಿತಾ ಬೈಜು ಅವರಿಗೆ ₹60 ಲಕ್ಷ ಸಂಭಾವನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಗೌತಮ್ ವಾಸುದೇವ್ ಮೆನನ್:
ಚಿತ್ರ ನಿರ್ಮಾಪಕ ಹಾಗೂ ನಟರಾಗಿರುವ ಗೌತಮ್ ವಾಸುದೇವ್ ಮೆನನ್ ಅವರು ‘ಜನ ನಾಯಗನ್’ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದಕ್ಕಾಗಿ ಅವರಿಗೆ ಸುಮಾರು ₹30 ಲಕ್ಷ ಪಾವತಿಸಲಾಗಿದೆ ಎನ್ನಲಾಗಿದೆ.

ಪ್ರಿಯಾಮಣಿ:
ಪ್ರಿಯಾಮಣಿ ಅವರು ಈ ಚಿತ್ರಕ್ಕೆ ₹25 ರಿಂದ ₹30 ಲಕ್ಷದೊಳಗಿನ ಸಂಭಾವನೆಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನರೈನ್ ರಾಮ್:
‘ಕೈದಿ’ ಮತ್ತು ‘ವಿಕ್ರಮ್’ ಸಿನಿಮಾಗಳ ಮೂಲಕ ಗಮನ ಸೆಳೆದ ನಟ ನರೈನ್ ರಾಮ್ ಅವರು ‘ಜನ ನಾಯಗನ್’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಆಲ್ ಹ್ಯೂಮನಾಯ್ಡ್’ ಎಂಬ ವಿಭಿನ್ನ ಪಾತ್ರಕ್ಕಾಗಿ ಅವರಿಗೆ ₹15 ಲಕ್ಷದಿಂದ ₹20 ಲಕ್ಷದವರೆಗೆ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ರೀತಿಯಾಗಿ ‘ಜನ ನಾಯಗನ್’ ಸಿನಿಮಾ ತನ್ನ ತಾರಾಗಣ ಹಾಗೂ ಭಾರೀ ಸಂಭಾವನೆಗಳ ಕಾರಣಕ್ಕೂ ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.


Share It

You cannot copy content of this page