ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್ ರೇಸ್‌ನಲ್ಲಿ ಯಾರು ಮುಂಚೂಣಿ? 7 ದಿನಗಳ ಗಳಿಕೆಯಲ್ಲಿ ‘ಮಾರ್ಕ್’–‘45’ ಚಿತ್ರಗಳ ಸ್ಥಿತಿ ಏನು?

Share It

ಬಾಕ್ಸ್ ಆಫೀಸ್ ರೇಸ್‌ನಲ್ಲಿ ಯಾರು ಮುಂಚೂಣಿ? 7 ದಿನಗಳ ಗಳಿಕೆಯಲ್ಲಿ ‘ಮಾರ್ಕ್’–‘45’ ಚಿತ್ರಗಳ ಸ್ಥಿತಿ

ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ತೆರೆಗೆ ಬಂದಿದ್ದು, ನಂತರವೇ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಹಾಗೂ ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಅಭಿನಯದ ‘45’ ಸಿನಿಮಾಗಳು ಡಿಸೆಂಬರ್ 25ರಂದು ಏಕಕಾಲದಲ್ಲಿ ಬಿಡುಗಡೆಯಾದವು.

ಒಂದೇ ದಿನ ಬಿಡುಗಡೆಯಾಗಿ ಒಂದು ವಾರ ಪೂರೈಸಿರುವ ಈ ಎರಡು ಚಿತ್ರಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಯಾವುದು ಮುನ್ನಡೆ ಸಾಧಿಸಿದೆ ಎಂಬ ಕುತೂಹಲಕ್ಕೆ ಇಲ್ಲಿದೆ ವಿವರ. ‘ಮಾರ್ಕ್’ ಚಿತ್ರವನ್ನು ತಮಿಳು ನಿರ್ದೇಶಕ ವಿಜಯಕ್ ಕಾರ್ತಿಕೇಯ ನಿರ್ದೇಶಿಸಿದ್ದು, ‘45’ ಚಿತ್ರಕ್ಕೆ ಅರ್ಜುನ್ ಜನ್ಯಾ ನಿರ್ದೇಶನ ನೀಡಿದ್ದಾರೆ. ಎರಡೂ ಚಿತ್ರಗಳು ಆಕ್ಷನ್–ಥ್ರಿಲ್ಲರ್ ಶೈಲಿಯವು. ಆದರೆ ಮೊದಲ ವಾರದ ಪ್ರದರ್ಶನದಲ್ಲಿ ಸ್ಪಷ್ಟ ಮುನ್ನಡೆ ‘ಮಾರ್ಕ್’ ಚಿತ್ರದ್ದಾಗಿದೆ.

ಇದುವರೆಗೆ ‘ಮಾರ್ಕ್’ ಸಿನಿಮಾ ಸುಮಾರು 21.14 ಕೋಟಿ ರೂ. ಗಳಿಕೆ ದಾಖಲಿಸಿದೆ. ಸುಮಾರು 40 ಕೋಟಿ ರೂ. ಬಜೆಟ್‌ನ ಈ ಚಿತ್ರ ಮೊದಲ ದಿನವೇ 8.6 ಕೋಟಿ ರೂ. ಸಂಗ್ರಹಿಸಿ ಭರವಸೆ ಮೂಡಿಸಿತು. ದಿನದಿಂದ ದಿನಕ್ಕೆ ಕಲೆಕ್ಷನ್ ಸ್ವಲ್ಪ ಇಳಿಕೆಯಾದರೂ, ಪ್ರತಿದಿನವೂ ಕೋಟಿಯ ಆಸುಪಾಸಿನಲ್ಲಿ ಆದಾಯ ಬಂದಿದೆ. ಏಳನೇ ದಿನವಾದ ಡಿಸೆಂಬರ್ 31ರಂದು ಅಂದಾಜು 90 ಲಕ್ಷ ರೂ. ಕಲೆಕ್ಷನ್ ಕಂಡಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ‘45’ ಚಿತ್ರವು ಮೊದಲ ವಾರದಲ್ಲಿ 13.32 ಕೋಟಿ ರೂ. ಗಳಿಸಿದೆ. ಈ ಚಿತ್ರವೂ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಮೊದಲ ದಿನ 5.5 ಕೋಟಿ ರೂ. ಗಳಿಕೆ ಕಂಡಿತ್ತು. ಆದರೂ ‘ಮಾರ್ಕ್’ ಎದುರು ಬಾಕ್ಸ್ ಆಫೀಸ್‌ನಲ್ಲಿ ‘45’ ಹಿಂದೆ ಉಳಿದಿದೆ. ‘ಮಾರ್ಕ್’ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡ ಈಗಾಗಲೇ ಸಕ್ಸಸ್ ಮೀಟ್ ನಡೆಸಿದ್ದು, ಸುದೀಪ್ ಅವರು ಅಭಿಮಾನಿಗಳೊಂದಿಗೆ ಸಂತೋಷ್ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿದರು. ಪೈರಸಿ ಸಮಸ್ಯೆಗಳ ನಡುವೆಯೂ ‘ಮಾರ್ಕ್’ ಉತ್ತಮ ಪ್ರದರ್ಶನ ನೀಡಿದೆ.

ತಮಿಳಿನಲ್ಲಿ ಹೊಸ ವರ್ಷಕ್ಕೆ ಬಿಡುಗಡೆ: ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಇಂದು (ಜನವರಿ 1) ತಮಿಳಿನಲ್ಲಿ ತೆರೆಗೆ ಬರುತ್ತಿದೆ. ನಿರ್ದೇಶಕ ಹಾಗೂ ತಾಂತ್ರಿಕ ತಂಡದಲ್ಲಿ ಹೆಚ್ಚಿನವರು ತಮಿಳಿನವರಾಗಿದ್ದರೂ, ನಟರ ಬಳಗದಲ್ಲಿ ಕನ್ನಡ ಕಲಾವಿದರೇ ಹೆಚ್ಚು. ಕಳೆದ ವರ್ಷ ಡಿಸೆಂಬರ್ 25ರಂದು ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿದ್ದ ಸುದೀಪ್ ಅವರ ‘ಮ್ಯಾಕ್ಸ್’ ಚಿತ್ರದಲ್ಲಿ ಕೆಲಸ ಮಾಡಿದ ಹಲವರು ‘ಮಾರ್ಕ್’ದಲ್ಲೂ ಕಾರ್ಯನಿರ್ವಹಿಸಿದ್ದಾರೆ.

‘ಡೆವಿಲ್’ ಚಿತ್ರದ ಸ್ಥಿತಿ: ‘ಮಾರ್ಕ್’ ಮತ್ತು ‘45’ ಬಿಡುಗಡೆಯಿಗೂ ಮುನ್ನ ಡಿಸೆಂಬರ್ 11ರಂದು ತೆರೆಕಂಡ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಸುಮಾರು 25.65 ಕೋಟಿ ರೂ.ಗಳಿಕೆ ದಾಖಲಿಸಿದೆ. ಇದು ಕಡಿಮೆ ಬಜೆಟ್‌ನ ಚಿತ್ರವಾಗಿರುವುದರಿಂದ ನಷ್ಟದ ಪ್ರಶ್ನೆ ಇಲ್ಲ. ಎದುರಾದ ಸವಾಲುಗಳನ್ನು ಗಮನಿಸಿದರೆ, ‘ಡೆವಿಲ್’ ಸಾಧಿಸಿರುವ ಕಲೆಕ್ಷನ್ ಸಮಾಧಾನಕರವೆಂದೇ ಹೇಳಬಹುದು.


Share It

You cannot copy content of this page