ರಾಜಕೀಯ ಸುದ್ದಿ

ರಾಜ್ಯದ ಮುಂದಿನ ಮುಖ್ಯಕಾರ್ಯದರ್ಶಿ ಯಾರು?

Share It

ಬೆಂಗಳೂರು: ಸರಕಾರದ ಮುಖ್ಯಕಾರ್ಯದರ್ಶಿ ರಜನೀಶ್ ಗೋಯೆಲ್ ಅಧಿಕಾರವಧಿ ಇದೇ ತಿಂಗಳ ಕೊನೆಗೆ ಮುಕ್ತಾಯವಾಗಲಿದ್ದು, ಮುಂದಿನ ಸಿಎಸ್ ಯಾರು ಎಂಬ ಕುತೂಹಲ ಮೂಡಿದೆ.

ಜೇಷ್ಠತೆ ಆಧಾರದಲ್ಲಿ ಅಜಯ್ ಸೇಠ್ ಮುಂಚೂಣಿಯಲ್ಲಿದ್ದು, ಅವರು ಕೇಂದ್ರ ಸೇವೆಯಲ್ಲಿದ್ದಾರೆ. ಕೇಂದ್ರದ ಹಣಕಾಸು ಸಚಿವಾಲಯದ ಸೇವೆಯಲ್ಲಿರುವ ಅವರು ರಾಜ್ಯಕ್ಕೆ ವಾಪಸ್ಸಾಗ್ತಾರಾ ಎಂಬುದು ಕುತೂಹಲ ಮೂಡಿದೆ. ಎರಡನೇ ಸ್ಥಾನದಲ್ಲಿ ರಜನೀಶ್ ಗೋಯೆಲ್ ಪತ್ನಿ ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ಇದ್ದಾರೆ.

ಅಜಯ್ ಸೇಠ್ ರಾಜ್ಯ ಸೇವೆಗೆ ವಾಪಸ್ಸಾಗದೆ ಇದ್ದರೆ, ಸಹಜವಾಗಿ ಶಾಲಿನಿ ರಜನೀಶ್ ಮುಖ್ಯಕಾರ್ಯದರ್ಶಿ ಯಾಗಲಿದ್ದಾರೆ. ಆಗ ಪತಿಯ ನಂತರ ಸಿಎಸ್ ಹುದ್ದೆ ವಹಿಸಿಕೊಂಡ ಎರಡನೇ ಘಟನೆಗೆ ಸಾಕ್ಷಿಯಾಗಲಿದ್ದಾರೆ. ಹಿಂದೆ ಬಿ.ಕೆ.ಭಟ್ಟಾಚಾರ್ಯ ಮತ್ತು ಥೆರೇಸಾ ಭಟ್ಟಾಚಾರ್ಯ ಇದೇ ರೀತಿ ಸಿಎಸ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಈ ಇಬ್ಬರು ಅಧಿಕಾರಿಗಳ ಜತೆಗೆ, ಪ್ರಸ್ತುತ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಹೆಸರು ಕೂಡ ಕೇಳಿಬರುತ್ತಿದೆ. ಆದರೆ, ಜೇಷ್ಠತೆ ಆಧಾರದ ಮೇಲೆ ಅವರ ನೇಮಕ ಅಷ್ಟೊಂದು ಸಲೀಸಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ನೇಮಕ ಮಾಡಿದರೆ, ಕಾನೂನು ತೊಡಕು ಉಂಟಾಗಲಿದೆ.

ಈ ಮೂವರು ಅಧಿಕಾರಿಗಳ ನಡುವೆ ಪೈಪೋಟಿಯಿದ್ದು, ಮೂವರಲ್ಲಿ ಒಬ್ಬರು ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸರಕಾರ ಯಾರನ್ನು ನೇಮಕ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Share It

You cannot copy content of this page