ಬೆಂಗಳೂರು : ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ಬಿಟ್ಟುಕೊಡಿ ಎಂದು ಹೇಳಿಕೆ ನೀಡಿದ ಶ್ರೀ ಚಂದ್ರಶೇಖರ್ ಭಾರತಿ ಸ್ವಾಮೀಜಿ ವಿರುದ್ಧ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.
ದೇವೇಗೌಡರ ಬಗ್ಗೆ, ದೇವೇಗೌಡರ ಕುಟುಂಬದ ಬಗ್ಗೆ ಇತ್ತೀಚೆಗೆ ಎಷ್ಟೆಲ್ಲ ಕಿರುಕುಳ ಆಗುತ್ತಿದೆ ಎಂಬುದು ಸ್ವಾಮೀಜಿ ಅವರಿಗೆ ಗೊತ್ತಿಲ್ವಾ? ಅದ್ಯಾಕೆ ಸ್ವಾಮೀಜಿ ಈವರೆಗೆ ಒಂದೂ ಮಾತಾಡಿಲ್ಲ, ದೇವೇಗೌಡರ ಮೇಲೆ ಅನುಕಂಪಕ್ಕಾದರೂ ಒಂದು ಮಾತು ಆಡಬಹುದಿತ್ತಲ್ವಾ? ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡರು ಅವರ ಮಠಕ್ಕೆ ಏನೆಲ್ಲ ಮಾಡಿದ್ದಾರೆ ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತಿದೆ. ಆದರೆ, ದೇವೇಗೌಡರ ಬಗ್ಗೆಯಾಗಲೀ, ಅವರ ಕುಟುಂಬದ ಬಗ್ಗೆಯಾಗಲೀ ಸ್ವಾಮೀಜಿ ಒಂದು ಕಾಳಜಿ ತೋರಿಸಲಿಲ್ಲ. ಈಗ ಸಿಎಂ ಸ್ಥಾನದ ಬಗ್ಗೆ ಮಾತನ್ನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಿಎಂ ಸ್ಥಾನದ ವಿಚಾರ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ನಾವು ಅದನ್ನು ಹೇಳಲು ಬರುವುದಿಲ್ಲ. ಅದು ದೊಡ್ಡದೊಡ್ಡವರಿಗೆ ಬಿಟ್ಟಿದ್ದು, ಸಿಎಂ ಸ್ಥಾನ ಯಾರಿಗೆ ಕೊಡಬೇಕು ಎಂಬುದನ್ನು ಕಾಂಗ್ರೆಸ್ ನಾಯಕರು ತೀರ್ಮಾನಿಸಿಕೊಳ್ತಾರೆ ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.
ಪೆನ್ ಡ್ರೈವ್ ಬಗ್ಗೆ ನಾನೇನು ಮಾತಾಡಲ್ಲ: ಇನ್ನು ತಮ್ಮ ಮತ್ತು ತಮ್ಮ ಪುತ್ರರ ವಿರುದ್ಧದ ಪ್ರಕರಣಗಳ ಕುರಿತು ಮಾತನಾಡಿದ ಅವರು, ಈ ಬಗ್ಗೆ ನಾನು ಮಾತನಾಡುವುದಿಲ್ಲ, ಪ್ರಕರಣ ತನಿಖೆಯ ಹಂತದಲ್ಲಿದೆ. ಹೀಗಾಗಿ, ನಾವೇನು ಮಾತನಾಡಬಾರದು ಎಂದಿದ್ದಾರೆ.
ಪ್ರೀತಂ ಗೌಡ, ಮೈತ್ರಿ ಪಕ್ಷದ ನಾಯಕರಾದರೂ, ತಮ್ಮ ವಿರುದ್ಧವೇ ಷಡ್ಯಂತ್ರ ನಡೆಸಿದ್ದಾರೆ ಎಂಬ ವಿಚಾರದ ಬಗ್ಗೆ ರೇವಣ್ಣ ಮಾತನಾಡಲು ನಿರಾಕರಿಸಿದರು. ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ. ನಾನು ಈಗಲೇ ಎಲ್ಲವನ್ನೂ ಮಾತನಾಡುವುದಿಲ್ಲ ಎಂದು ತಿಳಿಸಿದರು.