ರಾಜಕೀಯ ಸುದ್ದಿ

ಸೋತು ಗೆದ್ದ ಸೋಮಣ್ಣಗೆ ಸಿಕ್ಕಿದ್ದೇಗೆ ಸಚಿವ ಸ್ಥಾನದ ಬಳುವಳಿ ?

Share It

ಲೊಕಸಭೆ ಟಿಕೆಟ್ ಕೊಡದಂತೆ ಪಕ್ಷದ ನಾಯಕರಿಂದಲೇ ತಡೆ
ವಲಸಿಗರೆಂಬ ಕಾರಣಕ್ಕೆ  ಸ್ವಪಕ್ಷೀಯರಿಂದಲೇ ಚುನಾವಣೆಯಲ್ಲಿ ಹಿಂದೇಟು

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ವಿ.ಸೋಮಣ್ಣ ಇಂದು ಲೋಕಸಭೆಗೆ ಆಯ್ಕೆಯಾಗುವ ಜತೆಗೆ ಅಚ್ವರಿಯ ರೀತಿಯಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಜೀವನವೇ ಅನಿಶ್ಚಿತತೆಯ ಆಗರ ಎನ್ನುವುದು ಇದಕ್ಕೆ ಇರಬೇಕು. ವಿ.ಸೋಮಣ್ಣ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗರಿಗೆ ಬೇಡವಾಗಿದ್ದ ನಾಯಕ. ಅವರ ಸ್ವಕ್ಷೇತ್ರದಲ್ಲಿಯೇ ಅವರಿಗೆ ಟಿಕೆಟ್ ನೀಡದೆ ಅವಮಾನಿಸಲಾಯಿತು. ಬೇಕಿದ್ದರೆ ಬೇರೆ ಕ್ಷೇತ್ರದಲ್ಲಿ ನಿಂತುಕೊಳ್ಳಿ ಎನ್ನುವಂತೆ ನಡೆಸಿಕೊಳ್ಳಲಾಯಿತು. ಆಗಲೇ ಅವರು ಕಾಂಗ್ರೆಸ್ ಕಡೆಗೆ ಹೋಗುತ್ತಾರೆ ಎಂಬ ಅನುಮಾನವೂ ಸೃಷ್ಟಿಯಾಗಿತ್ತು.

ಕಾಂಗ್ರೆಸ್ ಗೆ ಹೋಗುವುದನ್ನು ತಡೆಯಲು ಎರಡು ಬೇರೆ ಬೇರೆ ಕ್ಷೇತ್ರಗಳಲ್ಲಿ ನಿಲ್ಲಿಸಿ, ಬಲಿಪಶು ಮಾಡಲಾಯ್ತು, ಲೋಕಸಭೆ ಗೆ ಟಿಕೆಟ್ ಕೊಡುವುದೇ ಅನುಮಾನವಿತ್ತು. ಟಿಕೆಟ್ ಸಿಕ್ಕ ಮೇಲೂ ಗೆಲುವು ಸುಲಭವಿರಲಿಲ್ಲ. ಆದರೆ, ಆಗ ಸಿಕ್ಕೊಂದು ಗೆಲುವು ಈಗ ಕೇಂದ್ರ ಕ್ಯಾಬಿನೆಟ್ ಸಚಿವ ಸ್ಥಾನ ತಂದುಕೊಟ್ಟಿದೆ‌.

ಕಳೆದ ಒಂದು ವರ್ಷದಿಂದೆ ಸೋಮಣ್ಣ ಅವರಿಗೆ ಅವರ ಸ್ವಕ್ಷೇತ್ರ ಗೋವಿಂದರಾಜನಗರ ಕ್ಷೇತ್ರದ ಟಿಕೆಟ್ ಕೊಡಲು ಬಿಜೆಪಿ ನಿರಾಕರಿಸಿತ್ತು. ಅಲ್ಲಿಗೆ ರವೀಂದ್ರಗೆ ಟಿಕೆಟ್ ನೀಡಿ, ಮುನಿಸಿಕೊಂಡ ಸೋಮಣ್ಣಗೆ ಶಿಕ್ಷೆ ಎಂಬಂತೆ, ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಸಲಾಯಿತು‌. ಪ್ರಸ್ತುತ ಕರ್ನಾಟಕದ ಸಿಎಂ ಆಗಿರುವ ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಕಣಕ್ಕಿಳಿಸಿ, ಹರಕೆಯ ಕುರಿ ಮಾಡಲಾಗಿತ್ತು. ಮತ್ತೊಂದು ಲಡೆ ಚಾಮರಾಜನಗರ ಕ್ಷೇತ್ರದಲ್ಲಿ ಕಣಕ್ಕಿಳಿಸಲಾಯಿತು‌. ಈ ಎರಡು ಕ್ಷೇತ್ರವನ್ನೂ ಸೋತ ಸೋಮಣ್ಣ ಸ್ವತಃ ಯಡಿಯೂರಪ್ಪ ಮತ್ತವರ ಮಕ್ಕಳ ವಿರುದ್ಧ ಕಿಡಿಕಾರಿದ್ದರು‌.

ಅನಂತರದ ಬೆಳವಣಿಗೆಗಳಲ್ಲಿ ಸೋಮಣ್ಣ ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದವು. ಅಂತಹದ್ದೇ ಕೆಲವು ಬೆಳವಣಿಗೆಗಳು ನಡೆದವು. ಅಂತಿಮವಾಗಿ ಲೋಕಸಭೆ ಚುನಾವಣೆ ಅಖಾಡದ ವಿಷಯ ಬಂತು. ಬೆಂಗಳೂರು ದಕ್ಷಿಣಕ್ಕೆ ಸೋಮಣ್ಣ ಟಿಕೆಟ್ ಕೇಳಿದ್ದರು. ನಿರಾಕರಿಸಿದ ಬಿಜೆಪಿ ಹೈಕಮಾಂಡ್, ಅಂತಿಮವಾಗಿ ತುಮಕೂರು ಟಿಕೆಟ್ ಕೊಟ್ಟು ಕೈ ತೊಳೆದುಕೊಂಡಿತು‌.

ಸೋಮಣ್ಣ ತುಮಕೂರು ಅಭ್ಯರ್ಥಿ ಆಗುತ್ತಿದ್ದಂತೆ ವಲಸಿಗರು ಎಂಬ ಕಾರಣಕ್ಕೆ ಅನೇಕರು ವಿರೋಧಿಸಿದರು. ಸ್ವತಃ ಬಿಜೆಪಿ ನಾಯಕ ಮಾಧುಸ್ವಾಮಿ ಸೋಮಣ್ಣ ಪರ ಕೆಲಸ ಮಾಡಲಿಲ್ಲ. ಈ ಎಲ್ಲ ಸವಾಲುಗಳ ನಡುವೆ ಸೋಮಣ್ಣ ತುಮಕೂರು ಕ್ಷೇತ್ರದಲ್ಲಿ 1,75,594 ಮತಗಳ ಅಂತರದಲ್ಲಿ  ಭರ್ಜರಿ ಗೆಲುವು ದಾಖಲಿಸಿದ್ದರು. ಆ ಗೆಲುವಿಗೆ ಸಹಜವಾಗಿಯೇ ಸಚಿಚ ಸ್ಥಾನ ಸಿಕ್ಕಿದೆ.

ಕೊನೆಯ ಕ್ಷಣದ ಬುಲಾವ್ !
ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನದವರೆಗೆ ಸೋಮಣ್ಣ ಕೇಂದ್ರ ಸಚಿವರಾಗ್ತಾರೆ ಎಂಬ ಊಹೆ ಯಾರಿಗೂ ಇರಲಿಲ್ಲ, ಜೋಷಿ, ಬೊಮ್ಮಾಯಿ, ಮತ್ತು ಕುಮಾರಸ್ವಾಮಿ ಮಂತ್ರಿಗಳಾಗುವುದು ಖಚಿತ ಎಂದು ಬಹುತೇಕರು ನಂಬಿದ್ದರು. ಆದರೆ, ಅಚ್ಚರಿಯ ರೀತಿಯಲ್ಲಿ ಭಾನುವಾರ ಬೆಳಗ್ಗೆ ಸೋಮಣ್ಣ ಅವರಿಗೆ ಕರೆ ಬಂದಿತ್ತು. ಅದೇ ರೀತಿ ಶೋಭಾ ಕರಂದ್ಲಾಜೆ ಮತ್ತೇ ಮಂತ್ರಿಯಾಗುತ್ತಾರೆ ಎಂಬ ಊಹೆ ಯಾರಿಗೂ ಇರಲಿಲ್ಲ. ಸೋಮಣ್ಣ ದೆಹಲಿಗೆ ತೆರಳಿ ನಂತರ ತಮ್ಮ ಕುಟುಂಬವನ್ನು ಕರೆಸಿಕೊಂಡರು.


Share It

You cannot copy content of this page