ಬೆಂಗಳೂರು: ಸಿಲಿಕಾನ್ ಸಿಟಿಯ ಬೊಮ್ಮನಹಳ್ಳಿ ವ್ಯಾಪ್ತಿಯ ಹೊಂಗಸಂದ್ರದಲ್ಲಿ ಕುಟುಂಬ ಕಲಹವು ಭೀಕರ ಅಂತ್ಯ ಕಂಡ ಘಟನೆ ನಡೆದಿದೆ. ಮಗಳು ಮನೆ ಬಿಟ್ಟು ಹೋದ ವಿಚಾರವನ್ನು ಮುಂದಿಟ್ಟುಕೊಂಡು ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಪತಿ, ಕೊನೆಗೆ ಪತ್ನಿಯ ಕೈಯಿಂದಲೇ ಪ್ರಾಣ ಕಳೆದುಕೊಂಡಿದ್ದಾನೆ.
ಮೃತ ವ್ಯಕ್ತಿಯನ್ನು ಹೊಂಗಸಂದ್ರ ನಿವಾಸಿ ಮುರುಗೇಶ್ (50) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಪತ್ನಿ ಲಕ್ಷ್ಮೀ (45) ಆರೋಪಿಯಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳಿಗೆ ಮದುವೆಯಾಗಿದ್ದು ಪತಿಯ ಮನೆಯಲ್ಲಿದ್ದಾರೆ. ಇನ್ನು ಕಿರಿಯ ಮಗಳು ಕೆಲ ದಿನಗಳ ಹಿಂದೆ ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ.
ಈ ವಿಷಯವೇ ದಂಪತಿಗಳ ನಡುವೆ ನಿರಂತರ ಕಲಹಕ್ಕೆ ಕಾರಣವಾಗಿತ್ತು. ಮಗಳು ಮನೆ ಬಿಟ್ಟು ಹೋಗಲು ಪತ್ನಿಯೇ ಕಾರಣ ಎಂದು ಶಂಕಿಸಿದ್ದ ಮುರುಗೇಶ್, ಲಕ್ಷ್ಮೀಗೆ ಪದೇಪದೇ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಮಂಗಳವಾರ ರಾತ್ರಿ ಕೂಡ ಇದೇ ವಿಚಾರವಾಗಿ ಗಂಭೀರ ವಾಗ್ವಾದ ನಡೆದಿದ್ದು, ಮಾತಿನ ಚಕಮಕಿ ತೀವ್ರ ರೂಪ ಪಡೆದುಕೊಂಡಿದೆ.
ಆ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಲಕ್ಷ್ಮೀ, ಮನೆಯಲ್ಲಿದ್ದ ಚಾಕುವಿನಿಂದ ಪತಿಗೆ ಇರಿದಿದ್ದಾಳೆ. ಗಂಭೀರ ಗಾಯಗೊಂಡ ಮುರುಗೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಾಹಿತಿ ಪಡೆದ ತಕ್ಷಣ ಬೊಮ್ಮನಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪತಿಯ ನಿರಂತರ ಕಿರುಕುಳವೇ ಈ ದುರ್ಘಟನೆಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಹೆಚ್ಚಿನ ವಿಚಾರಣೆ ಮುಂದುವರಿದಿದೆ.

