ಬೆಂಗಳೂರು: ಕತ್ತು ಸೀಳಿ ಸ್ಟಾಫ್ ನರ್ಸ್ ಹತ್ಯೆ: ಸಹೋದ್ಯೋಗಿ ಯುವಕನ ಬಂಧನ
ಬೆಂಗಳೂರು: ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸಹೋದ್ಯೋಗಿ ಯುವಕನೇ ಕೊಲೆಗಾರ ಎನ್ನಲಾಗಿದೆ.
ಚಿತ್ರದುರ್ಗದ ಹಿರಿಯೂರು ಮೂಲದ ಮಮತಾ (39) ಎಂಬುವರನ್ನು ಕೆ.ಎಸ್ ಲೇಔಟ್‌ನ ಪ್ರಗತಿಪುರದಲ್ಲಿನ ಮನೆಯಲ್ಲಿ ಡಿಸೆಂಬರ್ 24 ರಂದು ರಾತ್ರಿ ಕತ್ತು ಸೀಳಿ ಹತ್ಯೆಗೈಯ್ಯಲಾಗಿತ್ತು. ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತಿದ್ದ ಮಮತಾ, ತನ್ನ ಸ್ನೇಹಿತೆಯೊಂದಿಗೆ ಇದೇ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು. ಮಮತಾ ಅವರ ಸ್ನೇಹಿತೆ ಊರಿಗೆ ಹೋಗಿದ್ದಾಗ ಕೊಲೆ ನಡೆದಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಕೆ.ಎಸ್ ಲೇಔಟ್ ಠಾಣೆ ಪೊಲೀಸರು, ಮನೆಗೆ ಯಾರು ಬಂದಿರಬಹುದು ಎಂಬೆಲ್ಲ ಮಾಹಿತಿ ಕಲೆಹಾಕಿ, ಮಮತಾ ಜೊತೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸುಧಾಕರ್ ಎಂಬಾತನನ್ನು ಬಂಧಿಸಿದ್ದಾರೆ. ಸುಧಾಕರ್ ಹಾಗೂ ಮಮತಾ ಇಬ್ಬರೂ ಸ್ಟಾಫ್ ನರ್ಸ್ ಕೆಲಸ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಪರಸ್ಪರ ಪ್ರೀತಿ ಮೂಡಿತ್ತು ಎನ್ನಲಾಗಿದೆ.
ಇತ್ತೀಚೆಗೆ ಕುಟುಂಬಸ್ಥರ ನಿರ್ಧಾರದ ಮೇರೆಗೆ ಸುಧಾಕರ್ ಬೇರೊಂದು ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದ ಮಮತಾ ತನ್ನನ್ನೇ ಮದುವೆಯಾಗು ಎಂದು ಸುಧಾಕರ್‌ನ ಮೇಲೆ ಒತ್ತಡ ಹೇರಲಾರಂಭಿಸಿದ್ದಳು. ಹೀಗಾಗಿ, ಸುಧಾಕರ್ ಮಮತಾ ಮನೆಗೆ ಬಂದು ಕತ್ತು ಕೊಯ್ದು ಹತ್ಯೆಗೈದು, ಪರಾರಿಯಾಗಿದ್ದ ಎನ್ನಲಾಗಿದೆ.


