ಸುದ್ದಿ

“ಮಹಿಳೆಯರಿಗೆ ಸಮಾನ ಅವಕಾಶ ಅಗತ್ಯ, ಸಮಾಜದ ಪ್ರಗತಿಗೆ ಸಬಲೀಕರಣ ಮುಖ್ಯ”: ರಾಮಲಿಂಗಾರೆಡ್ಡಿ

Share It

ಬೆಂಗಳೂರು: ಮಹಿಳೆಯರ ಸಬಲೀಕರಣವು ಸಮಾಜದ ಸಮಗ್ರ ಅಭಿವೃದ್ಧಿಗೆ ಬಹಳ ಮುಖ್ಯವಾಗಿದ್ದು, ಅವರಿಗೆ ಸಮಾನ ಅವಕಾಶಗಳ ಜೊತೆಗೆ ಸುರಕ್ಷಿತ ವಾತಾವರಣ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಾರಿಗೆ ಸಚಿವ Ramalinga Reddy ಹೇಳಿದರು.

ನಗರದ Karnataka State Road Transport Corporation (ಕೆಎಸ್‌ಆರ್‌ಟಿಸಿ) ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು. ಕುಟುಂಬದಿಂದ ಹಿಡಿದು ಶಿಕ್ಷಣ, ವಿಜ್ಞಾನ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳವರೆಗೆ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು ಸುಮಾರು 1.04 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ ಸುಮಾರು 8,956 ಮಂದಿ ಮಹಿಳೆಯರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಇವರಲ್ಲಿ 3,167 ಮಂದಿ ನಿರ್ವಾಹಕರಾಗಿ, 2,254 ಮಂದಿ ತಾಂತ್ರಿಕ ಸಿಬ್ಬಂದಿಯಾಗಿ ಹಾಗೂ 3,535 ಮಂದಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ‘ಶಕ್ತಿ’ ಯೋಜನೆಯೂ ಮಹಿಳಾ ಸಬಲೀಕರಣಕ್ಕೆ ಸಹಾಯಕವಾಗಿದೆ ಎಂದು ಅವರು ಹೇಳಿದರು. ಮಾರ್ಚ್ 12ರವರೆಗೆ ಈ ಯೋಜನೆಯಡಿ ಸುಮಾರು 688 ಕೋಟಿ ಉಚಿತ ಪ್ರಯಾಣ ದಾಖಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪದ್ಮಶ್ರೀ ಪುರಸ್ಕೃತೆ ಡಾ. ವಿ. ಶುಭಾ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಉತ್ತಮ ಕಾರ್ಯನಿರ್ವಹಣೆ ತೋರಿದ 46 ಮಹಿಳಾ ಸಿಬ್ಬಂದಿಯನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಮತ್ತು ನಿರ್ದೇಶಕಿ ಕೆ.ಎಂ. ಗಾಯತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಚಿವರು ಹೊಸದಾಗಿ ಸೇರ್ಪಡೆಗೊಂಡ 45 ಕರ್ನಾಟಕ ಸಾರಿಗೆ ಬಸ್‌ಗಳು ಮತ್ತು 70 ಪಲ್ಲಕ್ಕಿ ಬಸ್‌ಗಳಿಗೆ ಚಾಲನೆ ನೀಡಿದರು. ಈ ಬಸ್‌ಗಳು ಉಡುಪಿ, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಹಾಗೂ ಚೆನ್ನೈ, ಹೈದರಾಬಾದ್‌, ಎರ್ನಾಕುಲಂ, ಕುಂಭಕೋಣಂ ಮತ್ತು ಪಣಜಿ ಸೇರಿದಂತೆ ಹೊರರಾಜ್ಯಗಳ ನಗರಗಳಿಗೆ ಸಂಚಾರ ಸೇವೆ ನೀಡಲಿವೆ ಎಂದು ತಿಳಿಸಲಾಯಿತು.


Share It

You cannot copy content of this page