ಅಪರಾಧ ರಾಜಕೀಯ ಸುದ್ದಿ

ಬಾಯಿಮಾತಿಗಷ್ಟೇ ಕಾನೂನು ಎಲ್ಲರಿಗೂ ಒಂದೇ !

Share It

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಘಟನೆಗಳೇ ಅತಿ ಹೆಚ್ಚಾಗಿ ವರದಿಯಾಗುತ್ತಿದ್ದು, ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಡವಿದೆಯಾ ಎಂಬುದೊಂದು ಪ್ರಶ್ನೆ ಮೂಡದಿರದು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕಾನೂನು ಸುವ್ಯವಸ್ಥೆ ಸಡಿಲವಾಗುತ್ತದೆ ಎಂಬುದು ಪ್ರತಿಪಕ್ಷ ಬಿಜೆಪಿಯ ವಾದ. ಆದರೆ, ಅದೇನೂ ಸರಿಯೋ ತಪ್ಪೋ ಅಥವಾ ಕಾಕತಾಳೀಯವೋ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹವುಗಳು ಹೆಚ್ಚಾಗಿಯೇ ವರದಿಯಾಗುತ್ತವೆ.

ಸರಕಾರದ ಒಟ್ಟಾರೆ ಅಂಕಿ-ಅಂಶಗಳನ್ನು ನೋಡಿದಾಗ, ಹಿಂದಿನ ಸರಕಾರಕ್ಕಿಂತ ಕಾಂಗ್ರೆಸ್ ಅವಧಿಯಲ್ಲಿ ಕಡಿಮೆ ಕ್ರೈಂ ದಾಖಲಾಗಿವೆ ಎನಿಸಿದರೂ, ಸದ್ದು ಮಾಡುವುದು ಮಾತ್ರ ಕಾಂಗ್ರೆಸ್ ಅವಧಿಯಲ್ಲಿಯೇ ಹೆಚ್ಚು. ಇದಕ್ಕೆ ಕಾರಣ ಏನಿರಬಹುದು ಎಂಬುದನ್ನು ಕಾಂಗ್ರೆಸ್ ನಾಯಕರೇ ಹುಡುಕಿಕೊಳ್ಳಬೇಕು.

ಮಾಧ್ಯಮಗಳ ಆರ್ಭಟ, ಪ್ರತಿಪಕ್ಷ ಘಟನೆಯನ್ನು ತಮ್ಮ ಹೋರಾಟಕ್ಕೆ ಬಳಸಿಕೊಳ್ಳುವ ರೀತಿ, ಇವೆರೆಡು ಕಾಂಗ್ರೆಸ್ ಅವಧಿಯಲ್ಲಿ ಹೆಚ್ಚು ಕ್ರೈಂ ನಡೆಯುತ್ತದೆ ಎಂಬಂತೆ ಭಾಸವಾಗುವಂತೆ ಮಾಡುತ್ತದೆ. ಇರಲಿ, ಯಾವ ಸರಕಾರವಾಗಲೀ, ಕ್ರೈಂ ಕಡಿಮೆಯಾದರೆ, ನಾಡು ಸುಭೀಕ್ಷವಾಗಿರುತ್ತದೆ.

ನೇಹಾ ಕೊಲೆ ಪ್ರಕರಣ, ಅಂಜಲಿ ಕೊಲೆ ಪ್ರಕರಣ, ಮಡಿಕೇರಿಯಲ್ಲಿ ಅಪ್ರಾಪ್ತೆಯ ಕೊಲೆ ಪ್ರಕರಣ, ದಾವಣಗೆರೆಯ ಲಾಕಪ್ ಡೆತ್ ಆರೋಪ, ಹರೀಶ್ ಪೂಂಜಾ ಪ್ರಕರಣ, ಬೆಂಗಳೂರಿನ ರೇವ್ ಪಾರ್ಟಿ, ಇನ್ನು ಉಡುಪಿಯದ್ದು ಎಂದು ವೈರಲ್ ಆಗಿರುವ ಗ್ಯಾಂಗ್ ವಾರ್ ವಿಡಿಯೋ ಪ್ರಕರಣಗಳೆಲ್ಲವೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಷ್ಟೊಂದು ಚೆನ್ನಾಗಿಲ್ಲ ಎಂಬುದನ್ನು ಸಾರುತ್ತವೆ.

ಈ ನಡುವೆ ಪೊಲೀಸರು, ಸಾಮಾನ್ಯ ಜನರು ಮತ್ತು ಉಳ್ಳವರ ನಡುವೆ ನಡೆದುಕೊಳ್ಳುವ ರೀತಿ ಜನಸಾಮಾನ್ಯನನ್ನು ಇಂತಹ ಘಟನೆಗಳಾದಾಗ ಕೆರಳುವಂತೆ ಮಾಡುತ್ತವೆ. ಪ್ರಜ್ವಲ್ ಪ್ರಕರಣದಲ್ಲಿ ಈವರೆಗೆ ಎಸ್‌ಐಟಿ ರಚನೆಯಾದರೂ, ಪ್ರಜ್ವಲ್ ಬಂಧನವಾಗಿಲ್ಲ. ಇದು ಸಹಜವಾಗಿಯೇ ಪೊಲೀಸ್ ವ್ಯವಸ್ಥೆ ಮೇಲೆ ಸಾಮಾನ್ಯ ಜನರಿಗೆ ಅನುಮಾನ ಬರುವಂತೆ ಮಾಡುತ್ತದೆ.

ದಾವಣಗೆರೆಯಲ್ಲಿ ಎಫ್‌ಐಆರ್ ಮಾಡದೆ,ಆರೋಪಿಯನ್ನು ಬಂಧಿಸಿ, ಠಾಣೆಗೆ ಕರೆತಂದು, ಈಗ ಆತನ ಜೀವ ಹೋಗಿದೆ. ಇದು ಪೊಲೀಸ್ ವೈಫಲ್ಯ ಎನ್ನಬೇಕೋ, ಗ್ರಹಚಾರ ಎನ್ನಬೇಕೋ ಗೊತ್ತಿಲ್ಲ. ನೇಹಾ ಪ್ರಕರಣದಲ್ಲಿ ಸುಲಭಕ್ಕೆ ಸಿಕ್ಕಿದ ಆರೋಪಿ, ಅಂಜಲಿ ಪ್ರಕರಣದಲ್ಲಿ ಕಾಡಿಸಿ, ಕೈಗೆ ಸಿಕ್ಕಿದ್ದಾನೆ. ಆ ಕೊಲೆ ನಡೆಯಲು ಪೊಲೀಸರ ವೈಫಲ್ಯ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ಇಷ್ಟೆಲ್ಲ ಬೆಳವಣಿಗೆಯ ನಡುವೆ ಶಾಸಕ ಹರೀಶ್ ಪೂಂಜಾ ಪ್ರಕರಣದಲ್ಲಿ ಪೊಲೀಸರ ನಡೆ ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ. ಪೊಲೀಸ್ ಠಾಣೆಗೆ ನುಗ್ಗಿ ಧಮಕಿ ಹಾಕಿದ್ದ ಶಾಸಕರ, ಅರೆಸ್ಟ್ ಮಾಡಲು ಪೊಲೀಸರು ಮೀನಾಮೆಷ ಎಣಿಸುತ್ತಾರೆ. ಇದೇ ರೀತಿಯ ಬೆದರಿಕೆಯನ್ನು ಸಾಮಾನ್ಯ ವ್ಯಕ್ತಿ ಹಾಕಿದ್ದರೆ, ಅವನನ್ನು ಕಂಬಿ ಎಣಿಸುವಂತೆ ಮಾಡಿರುತ್ತಿರಲಿಲ್ಲವೇ? ಎಂದು ಜನ ಸಾಮಾನ್ಯನ ಪ್ರಶ್ನೆ.

ಹೀಗೆ, ಸರಕಾರ, ಅದರಲ್ಲೂ ಪೊಲೀಸ್ ವ್ಯವಸ್ಥೆ ಉಳ್ಳವರ ಪರವಾಗಿ ನಡೆದುಕೊಳ್ಳುವುದು ಸಹಜವಾಗಿಯೇ ಸಣ್ಣದೊಂದು ಪ್ರಕರಣ ನಡೆದರೂ ಸಾಕು ದೊಡ್ಡದಾಗುವಂತೆ ಮಾಡುತ್ತದೆ. ಜನಸಾಮಾನ್ಯನೂ ಒಂದೇ, ಜನಪ್ರತಿನಿಧಿಯೂ ಒಂದೇ ಎಂಬಂತೆ ಪೊಲೀಸರು ವರ್ತಿಸಿದ ದಿನ ರಾಜ್ಯದ ಕ್ರೈಂ ರೇಟ್ ಕಡಿಮೆಯಾಗುತ್ತದೆ. ಆಗ ಜನತೆಗೂ ಪೋಲಿಸರ ಮೇಲೆ ನಂಬಿಕೆ ಬರುತ್ತದೆ.


Share It

You cannot copy content of this page