ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀ ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕದ ಸಾಂಸ್ಕೃತಿಕ, ಸಾಹಿತ್ಯ, ಕಲೆ, ಪರಂಪರೆ ಪೋಷಕರಾಗಿರುವ ಇಲ್ಲವೆ ಮೇಲ್ಕಂಡ ಕ್ಷೇತ್ರಗಳಲ್ಲಿ ಕನಿಷ್ಟ 25 ವರ್ಷಗಳಿಂದ ಸೇವಾ ನಿರತರಾದˌ 50 ವರ್ಷದ ವಯೋಮಾನ ಮೀರಿದ ವ್ಯಕ್ತಿ, ಸಂಘ, ಸಂಸ್ಥೆಗಳನ್ನು ಆಯ್ಕೆ ಮಾಡುವುದು ಈ ದತ್ತಿ ನಿಧಿಯ ಆಶಯವಾಗಿದೆ. 2016ರಿಂದಲೂ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ನೀಡುತ್ತಿದ್ದು, ಈ ಹಿಂದೆ ಮಾಜಿ ವಿಧಾನ ಪರಿಷತ್ ಸಭಾಪತಿ ಬಿ.ಜಿ.ಬಣಕಾರ್, ಪ್ರಖ್ಯಾತ ಲೇಖಕ ಡಾ.ಸಿ.ಪಿ.ಕೃಷ್ಣಕುಮಾರ್, ಜನಪದ ಸಾಹಿತ್ಯಕ್ಕೆ ಹೊಸ ನೆಲೆ ನೀಡಿದ ಚೆನ್ನಣ್ಣ ವಾಲಿಕರ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಶಿಕ್ಷಣ ತಜ್ಞ ಮತ್ತು ರಾಜಕಾರಣಿ ಡಾ.ಪ್ರಭಾಕರ ಕೋರೆ, ನ್ಯಾಯಮೂರ್ತಿ ಡಾ.ಶಿವರಾಜ.ವಿ.ಪಾಟೀಲ, ಶಿಕ್ಷಣ ತಜ್ಞ ಮತ್ತು ಕುಲಾಧಿಪತಿ ಡಾ.ವಿ.ಜಿ.ಜೋಸೆಫ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ನಾಲ್ಕು ಸಲ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ, ಮೂರು ಸಲ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿರುವ ಬಿ.ಎಸ್.ಯಡಿಯೂರಪ್ಪ ಸದಾ ಕನ್ನಡ ಮತ್ತು ಸಂಸ್ಕೃತಿಗೆ ಕೊಡುಗೆ ನೀಡಿದ್ದಾರೆ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ನಿರ್ವಹಣೆಗೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಂಘಟಿತವಾಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗಿರುವ ಕನ್ನಡದ ಬಗೆಗಿನ ಕಾಳಜಿ ಮತ್ತು ಸಾಂಸ್ಕೃತಿಕ ಕೊಡುಗೆ ಗಮನಿಸಿ ಪುರಸ್ಕಾರ ನೀಡಲಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

