ಬೆಂಗಳೂರು: ಫೆಬ್ರವರಿ 14ರಂದು ಡ್ರಗ್ಸ್ ಮಾತ್ರೆ ನೀಡಿ, ಸ್ನೇಹಿತರೇ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಖಾಸಗಿ ಕಾಲೇಜಿನ 19 ವರ್ಷದ ವಿದ್ಯಾರ್ಥಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ ಡಿಕ್ಸನ್ ಸ್ಯಾಂಡ್ರ ಹಾಗೂ ನಿಖಿಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ತಮಿಳುನಾಡು ಮೂಲದ ಯುವತಿ ಬೆಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇನ್ಸ್ಟಾಗ್ರಾಂನಲ್ಲಿ ಪಶ್ಚಿಮ ಬಂಗಾಳ ಮೂಲದ ಡಿಕ್ಸನ್ ಪರಿಚಯವಾಗಿತ್ತು. ಸಂತ್ರಸ್ತೆ ದೂರಿನ ಅನ್ವಯ, ‘ಪ್ರೀತಿಸುತ್ತಿರುವುದಾಗಿ ಹೇಳಿದ್ದ ಡಿಕ್ಸನ್, ಫೆ. 14ರಂದು ಯುವತಿಯನ್ನು ಜಕ್ಕೂರಿನ ವಿಲ್ಲಾಕ್ಕೆ ಆಹ್ವಾನಿಸಿದ್ದ.
ಅದರಂತೆ, ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತೆ ವಿಲ್ಲಾಗೆ ಹೋಗಿದ್ದರು. ಈ ವೇಳೆ ಡಿಕ್ಸನ್ ಹಾಗೂ ನಿಖಿಲ್ ಬಲವಂತವಾಗಿ ತನಗೆ ಮಾತ್ರೆ ತಿನ್ನಿಸಿದ್ದರು” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ”ಕೆಲ ಸಮಯದ ಬಳಿಕ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ತನ್ನ ಮೇಲೆ ಡಿಕ್ಸನ್ ಹಾಗೂ ನಿಖಿಲ್ ಅತ್ಯಾಚಾರ ಎಸಗಿದ್ದಾರೆ. ಬಳಿಕ ಘಟನೆ ಕುರಿತು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾರೆ”. ನಡೆದಿರುವ ಘಟನೆಯಿಂದ ತಾನು ಆಘಾತಕ್ಕೊಳಗಾಗಿದ್ದು, ನಂತರ ಸಹೋದರನ ಸೂಚನೆಯಂತೆ ದೂರು ನೀಡುತ್ತಿರುವುದಾಗಿ ಸಂತ್ರಸ್ತೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯುವತಿಯೇ ಸುಳ್ಳು ಆರೋಪ ಮಾಡುತ್ತಿದ್ದು, ಖಾಸಗಿ ವಾಹಿನಿ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿಸಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟ ಆರೋಪವೂ ಕೇಳಿ ಬಂದಿದೆ. ಯುವತಿ ದೂರಿಗೂ ಮೊದಲೇ ನಿಖಿಲ್ ಸಹ ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಅದರ ಅನ್ವಯ ಯುವತಿ, ಇಮ್ರಾನ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ. ಫೆ. 14ರಂದು ಪಾರ್ಟಿಗೆ ಬಂದಿದ್ದ ಯುವತಿ ತಾನೇ ತೀರಾ ಸಲುಗೆಯಿಂದ ವರ್ತಿಸುತ್ತಿದ್ದಳು.
ಆಕೆಯನ್ನು ಸುರಕ್ಷಿತವಾಗಿ ರಾಜಾಜಿನಗರದ ವಾರಿಯರ್ ಬೇಕರಿ ಬಳಿ ಡ್ರಾಪ್ ಮಾಡಿದ್ದೆ. ಆದರೆ, ಆನಂತರ ಇನ್‌ಸ್ಟಾಗ್ರಾಂ ವಿಡಿಯೋ ಮೂಲಕ ಯುವತಿ ಸುಳ್ಳು ಆರೋಪ ಮಾಡಿದ್ದಾರೆ. ನಂತರ ಖಾಸಗಿ ವಾಹಿನಿ ಪ್ರತಿನಿಧಿ ಹೆಸರಿನಲ್ಲಿ ಇಮ್ರಾನ್ ಎಂಬಾತ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿರುವುದಾಗಿ ನಿಖಿಲ್ ದೂರು ನೀಡಿದ್ದಾರೆ. ಸದ್ಯ ಎರಡೂ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

