ಧಾರವಾಡ: ರಾಜ್ಯ ಸರಕಾರದ ವಿವಿಧ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಾವಿರಾರು ಯುವಕರು ಭಾಗವಹಿಸಿದ್ದಾರೆ.
ಪ್ರತಿಭಟನೆಗೆ ಬಿಜೆಪಿ ನಾಯಕರು ಕೂಡ ಸಾಥ್ ನೀಡಿದ್ದು, ಸರಕಾರದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿಯಿವೆ. ಅವುಗಳನ್ನು ಭರ್ತಿ ಮಾಡದೆ ಸರಕಾರ ಯುವಜನರಿಗೆ ಉದ್ಯೋಗ ವಂಚಿತರನ್ನಾಗಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಅಧಿಸೂಚನೆ ಹೊರಡಿಸಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ತಳ್ಳಿ ನುಗ್ಗಿದರು. ವಿವಿಧ ನಾಯಕರ ಭಾವಚಿತ್ರಗಳಿಗೆ ಬೆಂಕಿಹಚ್ಚಿ ತಮ್ಮ ಆಕ್ರೋಶ ಹೊರಹಾಕಿದರು. ಪೊಲೀಸ್ ಆಯುಕ್ತ ಶಶಿಕುಮಾರ್ ಮನವೊಲಿಸುವ ಪ್ರಯತ್ನ ನಡೆಸಿದರಾದರೂ, ಯುವಕರು ಅವರ ಮಾತಿಗೆ ಬೆಲೆ ನೀಡದೆ ಪ್ರತಿಭಟನೆ ನಡೆಸಿದರು.
ಸರಕಾರ ಯಾವುದೇ ಸಾಬೂಬು ಹೇಳದೆ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕು. ಅಲ್ಲಿವರೆಗೆ ಈ ಹೋರಾಟ ನಿಲ್ಲಿಸುವುದಿಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿ ಸಂಘಟನೆಗಳು ಸ್ವಯಂಪ್ರೇರಿತವಾಗಿ ಭಾಗವಹಿಸಿದ್ದವು.

