ಬಿಜೆಪಿಗರಿಗೆ ಬೆಂಗ್ಳೂರ್ ಮೇಲೆ ಈಗ ಬಂತು ಪ್ರೀತಿ !

dk vs byv
Share It

ಪ್ರತಿ ವಾರ್ಡ್ನಲ್ಲಿ ಪ್ರತಿಭಟನೆ ಮಾಡ್ತಾರಂತೆ ರಾಜ್ಯಾಧ್ಯಕ್ಷರು

4 ವರ್ಷ ಚುನಾವಣೆಯನ್ನೇ ನಡೆಸದ ಬಿಜೆಪಿ ಹೊಸ ಡ್ರಾಮಾ

ಬೆಂಗಳೂರು: ಬಿಜೆಪಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಜನರ ಗಮನಸೆಳೆಯಲು ಮೇ. 28 ಕ್ಕೆ ಬೃಹತ್ ಪ್ರತಿಭಟನೆ ನಡೆಸುತ್ತಂತೆ, ಅದ್ಯಾಕೆ ಇದ್ದಕ್ಕಿಂದ್ದಂತೆ ಬೆಂಗಳೂರ್ ಮ್ಯಾಲೆ ಬಿಜೆಪಿಗರಿಗೆ ಇಷ್ಟೊಂದು ಪ್ರೀತಿ ಬಂತು ಅನ್ನೋದೀಗ ಮಿಲಿಯನ್ ಡಾಲರ್ ಪ್ರಶ್ನೆ.

ಬೆಂಗಳೂರಿನದ್ದು ಯಾವಾಗಲೂ ಬಗೆಹರಿಯದ ಬವಣೆ. ಹಾಗಂತ ಆಳುವ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯಬೇಕಿಲ್ಲ. ಆದರೆ, ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆದ್ರೂ ಒಮ್ಮೆಯೂ ಸರಕಾರವನ್ನು ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಗಮನಸೆಳೆಯದ ಬಿಜೆಪಿಗೆ ಇದೀಗ ಬಿಬಿಎಂಪಿ ವ್ಯಾಪ್ತಿ ನೆನಪಾಗಿದೆ. ಬಿಬಿಎಂಪಿ ಚುನಾವಣೆಗೆ ಸರಕಾರ ಸಿದ್ಧವಾಗುತ್ತಿದೆ ಎನ್ನುತ್ತಿದ್ದಂತೆ ಪ್ರತಿಭಟನೆ ನೆಪದಲ್ಲಿ ಪ್ರಚಾರ ಮಾಡಲು ಬಿಜೆಪಿ ಸಿದ್ಧವಾದಂತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಮಳೆ ಬಂದಾಗ ಸಮಸ್ಯೆಗಳಾಗುವುದು ಸಾಮಾನ್ಯ ಸಂಗತಿ. ಆದರೆ, ಅದೆಲ್ಲವನ್ನು ನಿಭಾಯಿಸುವುದು ಎಸಿ ರೂಮಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳ ಕೈಲಿ ಸಾಧ್ಯವಿಲ್ಲ. ಸ್ಥಳೀಯ ಜನಪ್ರತಿನಿಧಿಯಿದ್ದರೆ, ಆತನನ್ನು ಪ್ರಶ್ನಿಸಿ ಜನ ಕೆಲಸ ಮಾಡಿಸಿಕೊಳ್ಳುತ್ತಾರೆ.

ಮುಂದೆ ಮತ ಕೇಳಬೇಕಾದ ಅನಿವಾರ್ಯತೆಯಲ್ಲಿ ಬಿಬಿಎಂಪಿ ಸದಸ್ಯನಾದರೂ ಜನರ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿದ್ದ. ಆದರೆ, ನಾಲ್ಕು ವರ್ಷಗಳ ಕಾಲ ಬಿಬಿಎಂಪಿಗೆ ಚುನಾವಣೆಯೇ ನಡೆದಿಲ್ಲ. ಈಗ ಜನರ ಬವಣೆ ಕೇಳುವವರೇ ಇಲ್ಲ. ಇದರಲ್ಲಿ ಮೂರು ವರ್ಷ ಅಧಿಕಾರ ಮಾಡಿದ್ದು, ಬಿಜೆಪಿಯೇ ಎಂಬುದು ಗಮನಾರ್ಹ.

ಬಿಜೆಪಿ ಅಧಿಕಾರದಲ್ಲಿದ್ದಷ್ಟು ದಿನ ಬಿಬಿಎಂಪಿ ಚುನಾವಣೆಯನ್ನು ಎಷ್ಟು ಸಾಧ್ಯವೋ ಅಷ್ಟು ಮುಂದೂಡುವ ಪ್ರಯತ್ನವನ್ನೇ ಮಾಡಿತ್ತು. ವಾರ್ಡ್ ವಿಂಗಡಣೆ ನೆಪದಲ್ಲಿ, ಹೈಕೋರ್ಟ್ ಮೆಟ್ಟಿಲೇರಿ, ಹೈಕೋರ್ಟ್ ಚುನಾವಣೆ ನಡೆಸಲು ಹಸಿರು ನಿಶಾನೆ ತೋರುತ್ತಿದ್ದಂತೆ, ಅದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನೆ ಮಾಡಿ, ಒಟ್ಟಾರೆ, ಚುನಾವಣೆ ನಡೆಯದಂತೆ ಏನೇನು ಮಾಡಬಹುದೋ ಅದೆಲ್ಲವನ್ನೂ ಬಿಜೆಪಿ ಸರಕಾರ ಮಾಡಿತ್ತು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ, ಸರಕಾರ ಅಷ್ಟೇನೂ ಬಿಬಿಎಂಪಿ ಚುನಾವಣೆಗೆ ಉತ್ಸಾಹ ತೋರಿಸಲಿಲ್ಲ, ಆದರೆ, ಲೋಕಸಭೆ ಚುನಾವಣೆ ಕೇವಲ ೬ ತಿಂಗಳಲ್ಲಿದೆ ಎಂಬ ಸಬೂಬು ಅವರ ಮುಂದಿತ್ತು. ಆದರೆ, ಅದ್ಯಾವುದೂ ಇಲ್ಲದೆ ಚುನಾವಣೆ ಮುಂದೂಡಿ, ಮೂರು ವರ್ಷ ಜನಪ್ರತಿನಿಧಿಗಳಿಲ್ಲದ ಬಿಬಿಎಂಪಿ ನಡೆಸಿದ ಖ್ಯಾತಿ ಬಿಜೆಪಿಯದ್ದು. ಬಿಜೆಪಿ ಇಂತಹ ಸನ್ನಿವೇಶ ಸೃಷ್ಟಿ ಮಾಡಿದ್ದು, ಇದೇ ಮೊದಲೇನಲ್ಲ. 2006-07ರಲ್ಲಿಯೂ ಇದೇ ರೀತಿ ಮರ‍್ನಾಲ್ಕು ವರ್ಷ ಚುನಾವಣೆ ಮುಂದೂಡಿ, ಅಂತಿಮವಾಗಿ 2010 ರಲ್ಲಿ ಚುನಾವಣೆ ನಡೆಸಿತ್ತು.

ಕಾರ್ಯಕರ್ತರ ಒತ್ತಡಕ್ಕೋ, ಸಂವಿಧಾನ ಮೇಲಿನ ಗೌರವಕ್ಕೋ ಕಾಂಗ್ರೆಸ್ ಸರಕಾರ ಬಿಬಿಎಂಪಿ ಚುನಾವಣೆ ನಡೆಸುವ ಮನಸ್ಸು ಮಾಡಿದೆ. ಅದಕ್ಕೆ ಪೂರಕವಾದ ಸಿದ್ಧತೆಗಳನ್ನು ಮುಖ್ಯಮಂತ್ರಿ ಮತ್ತು ನಗರದ ಉಸ್ತುವಾರಿಯೂ ಆದ ಡಿಸಿಎಂ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಸಭೆ ಕರೆದು, ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ, ನಗರ ಪ್ರದಕ್ಷಿಣೆ ಮೂಲಕ ಜನರಿಗೆ ಅಭಿವೃದ್ಧಿಯ ಭರವಸೆ ನೀಡುತ್ತಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಎಚ್ಚರವಾಗಿದೆ. ಈಗ ಪ್ರತಿಭಟನೆ ಮೂಲಕ ಬಿಬಿಎಂಪಿ ಚುನಾವಣೆಗೆ ರಣಕಹಳೆ ಊದಲು ಸಜ್ಜಾಗಿದ್ದಾರೆ.

ನಗರದ ಬಿಜೆಪಿ ಪಾಲಿನ ಉಸ್ತುವಾರಿ, ವಿಪಕ್ಷ ನಾಯಕ ಆರ್.ಅಶೋಕ್ ಅವರಂತೂ ಬಿಬಿಎಂಪಿ ಚುನಾವಣೆ ನಡೆಸುವ ಸಂಬAಧ ಯಾವುದೇ ಉತ್ಸಾಹ ಉಳಿಸಿಕೊಂಡಿರಲಿಲ್ಲ. ಈಗಲೂ ಬಿಜೆಪಿಯ ಬಹುತೇಕ ನಗರದ ಶಾಸಕರಿಗೆ ಬಿಬಿಎಂಪಿ ಚುನಾವಣೆ ನಡೆಸುವ ಮನಸ್ಸಿಲ್ಲ. ಆದರೂ, ಕಾಂಗ್ರೆಸ್ ಚುನಾವಣೆಗೆ ಹೋಗುವುದೇ ಆದರೆ, ಅದಕ್ಕೇನು ಮಾಡಬಹುದು ಎಂಬುದಷ್ಟೇ ಬಿಜೆಪಿಯ ಪ್ರತಿತಂತ್ರ. ಅದನ್ನು ಬಿಟ್ಟು, ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಿಗೆ ಅಧಿಕಾರ ಕೊಡಬೇಕೆನ್ನುವ ಯಾವ ಇರಾದೆಯೂ ಇದ್ದಂತೆ ಕಾಣುತ್ತಿಲ್ಲ.

ಒಟ್ಟಾರೆ, ಬಿಜೆಪಿ ಎಚ್ಚರಗೊಂಡಿರುವ ಕಾರಣದಿಂದ, ಸರಕಾರ ಎಲೆಕ್ಷನ್ ನಡೆಸಲು ಸಜ್ಜಾಗುತ್ತಿರುವ ಕಾರಣದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಚುನಾವಣೆ ಚಟುವಟಿಕೆಗಳು ಗರಿಗೆದರಿಕೊಂಡಿವೆ. ನಾಲ್ಕು ವರ್ಷದಿಂದ ಜಿಡ್ಡು ಹಿಡಿದಿದ್ದ ಅಧಿಕಾರ ವರ್ಗಕ್ಕೆ ಜನಪ್ರತಿನಿಧಿಗಳು ಬರುತ್ತಾರೆಂಬ ಸಂದೇಶ ಕೊಂಚ ಸಂಕಟ ತರಿಸಿದೆ. ಇನ್ನು ಲೋಕಸಭೆಯ ಅಖಾಡದ ಕಾವು ತಣಿಯುವ ಮೊದಲೇ ಬಿಬಿಎಂಪಿ ಚುನಾವಣೆಯ ಬಿಸಿ,ಬೆಂಗಳೂರಲ್ಲಿ ಏರಲಿದೆ. ಅದಕ್ಕೆ ಏನೇನು ನಾಟಕಗಳು ನಡೆಯುತ್ತವೆಯೋ ಕಾದು ನೋಡಬೇಕಿದೆ.


Share It

You may have missed

You cannot copy content of this page