ಬಿಜೆಪಿ ಮೈತ್ರಿ ನನಗೆ ಮುಖ್ಯವಲ್ಲ: ಎಚ್.ಡಿ.ಕೆ ಬಾಂಬ್!
ರಾಯಚೂರು, ಮೇ 3: ಅಣ್ಣನ ಮಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತಲೆ ಬಿಸಿಯಲ್ಲಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯೊಂದಿಗಿನ ಮೈತ್ರಿ ಉಳಿಸಿಕೊಳ್ಳುವ ಉತ್ಸಾಹ ಕಳೆದುಕೊಂಡಿದ್ದಾರೆ. ಬಿಜೆಪಿ ಮೈತ್ರಿ ಹೋದರೂ ಪರವಾಗಿಲ್ಲ ಎನ್ನುವಂತಹ ಮಾತನ್ನು ಕುಮಾರಸ್ವಾಮಿ ರಾಯಚೂರಿನಲ್ಲಿ ಆಡಿದ್ದಾರೆ.
ರಾಯಚೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಿಕ ಬಿಜೆಪಿ ಮೈತ್ರಿ ಏನಾಗಬಹುದು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ತನಗೆ ಬಿಜೆಪಿ ಮೈತ್ರಿ ಮುಖ್ಯ ಅಲ್ಲ ಎಂದು ಹೇಳಿದರು.
ಪ್ರಜ್ವಲ್ ಪ್ರಕರಣದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಇದೆಲ್ಲಾ ಕಾಲ ನಿರ್ಧಾರ ಮಾಡುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. ತಾವು ಪಲಾಯನವಾದ ಮಾಡಲ್ಲ. ಪ್ರಜ್ವಲ್ ಪ್ರಕರಣ ಬೆಳಕಿಗೆ ಬಂದಾಗ ಇದು ಮಾರ್ಫಿಂಗ್ ವಿಡಿಯೋ ಎಂದು ಹೇಳಿದೆವಾ? ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲಿ ಎಂದು ಧೈರ್ಯವಾಗಿ ಹೇಳಿದ್ದೇವೆ. ತನಿಖೆ ಆಗಲಿ, ತಪ್ಪಿತಸ್ಥರು ಯಾರೆಂದು ಗೊತ್ತಾಗಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಈ ಪ್ರಕರಣವನ್ನು ಇಟ್ಟುಕೊಂಡು ಪಾಪ ಆ ದೇವೇಗೌಡರ ವರ್ಚಸ್ಸನ್ನು ಕುಂದಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಸಾಧ್ಯವಾಗಲ್ಲ. ದೇವರು ನನ್ನ ಹಣೆಯಲ್ಲಿ ಏನು ಬರೆದಿದ್ದಾನೋ ಅದನ್ನು ಕಿತ್ತುಕೊಳ್ಳಲು ನಿಮ್ಮಿಂದ ಆಗಲ್ಲ ಎಂದು ಎಚ್.ಡಿ.ಕೆ ಕಿಡಿ ಕಾರಿದರು.