ಮುಂದಿನ 2 ದಿನಗಳಲ್ಲೂ ಬೆಂಗಳೂರಿನಲ್ಲಿ ಬರುತ್ತದೆ ಭರ್ಜರಿ ಮಳೆ!
ಮೊನ್ನೆ, ನಿನ್ನೆ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಒಳ್ಳೆಯ ಬೇಸಿಗೆ ಮಳೆ ಸುರಿದು ತಂಪೆರೆದಿದೆ.
ಇದೇ ರೀತಿ ಈಗ ಮುಂದಿನ 2 ದಿನ ಬೆಂಗಳೂರು ಸೇರಿದಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಶನಿವಾರ ಸಹ ಬೆಂಗಳೂರಿನಲ್ಲಿ ಮಳೆಯಾಗಲಿದೆ.
ನಿನ್ನೆ ಶುಕ್ರವಾರ ಬೆಂಗಳೂರಿನಲ್ಲಿ ಗಾಳಿ ಸಮೇತ ಮಳೆ ಆಗಿದೆ. ಗಾಳಿಯ ವೇಗ ಗಂಟೆಗೆ 30ರಿಂದ 40 ಕಿಮೀ ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಒಂದು ವಾರದಿಂದ ಬೆಂಗಳೂರು ಮಹಾನಗರದಲ್ಲಿ ಭಾರಿ ಬಿಸಿಲು ಅತಿಯಾಗಿತ್ತು. ಈ ನಡುವೆ ಒಂದಿಷ್ಟು ಬೇಸಿಗೆ ಮಳೆಯಾಗಿದ್ದು ಜನರು ಖುಷಿಪಡುವಂತಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಲ್ಲೂ ಶನಿವಾರ ಸಂಜೆ ಬಳಿಕೆ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ.
ಇನ್ನು ಬೀದರ್, ಕಲ್ಬುರ್ಗಿ, ಬಾಗಲಕೋಟೆ, ಕೊಪ್ಪಳ, ವಿಜಯನಗರ ಭಾಗದಲ್ಲಿ ಉಷ್ಣ ಅಲೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಸದ್ಯ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಲಿ ಎಂದು ಜನ ಕಾಯ್ತಾ ಇದ್ದಾರೆ. ಬೆಂಗಳೂರಿನಲ್ಲಿ ಸತತ ಎರಡು ತಿಂಗಳ ಉರಿವ ಬಿಸಿಲ ನಂತರ ಮಳೆಯಾಗುತ್ತಿರುವುದಕ್ಕೆ ಜನರು ನಿರಾಳವಾಗಿ ಇನ್ನಷ್ಟು ಮಳೆ ಬಂದು ಉಷ್ಣಾಂಶ ತಗ್ಗಬೇಕು ಎಂದು ಬಯಸಿದ್ದಾರೆ.