ಬೆಂಗಳೂರು, ಮೇ 3: ಈ ವರ್ಷದ ಬೇಸಿಗೆಕಾಲದಲ್ಲಿ ರಾಜ್ಯವಿಡೀ ಬಿಸಿ ಗಾಳಿಯೊಂದಿಗೆ ತಾಪಮಾನ ಹೆಚ್ಚಾಗಿತ್ತು. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನಕ್ಕೆ ಜನರು ಮನೆಗಳಿಂದ ಹೊರಬರಲು ನಡುಗಿದ್ದರು.
ಇತ್ತ ರಾಜಧಾನಿ ಬೆಂಗಳೂರು ನಗರದಲ್ಲೂ ಕೂಡ ಈ ಬೇಸಿಗೆಯಲ್ಲಿ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗಿತ್ತು. ಆದರೆ ನಿನ್ನೆಯಿಂದ ವರುಣ ಕೃಪೆ ತೋರಿದ್ದು, ಬೆಂಗಳೂರಿನಲ್ಲಿ ಜೋರು ಮಳೆಯ ಆರ್ಭಟ ಶುರುವಾಗಿದೆ. ಇಂದು ಕೂಡ ಬೆಂಗಳೂರಿನಲ್ಲಿ ಮಳೆ ಸುರಿದಿದ್ದು, ವಾತಾವರಣವೂ ಸಹ ಕೊಂಚ ಕೂಲ್ ಕೂಲ್ ಆಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಮಳೆ ಆಗಿದ್ದು, ಕೆಲ ಅವಾಂತರಗಳು ಕೂಡ ಸಂಭವಿಸಿದೆ. ಇಷ್ಟಾದರೂ ಬೇಸಿಗೆ ಮಳೆಯಿಂದ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಸಿಡಿಲು ಬಡಿದು ಮನೆಗೆ ಬೆಂಕಿ!
ಇನ್ನು ರಾಮನಗರದಲ್ಲಿ ಭಯಾನಕ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿದ ಪರಿಣಾಮ ನಗರದ ಪ್ರಖ್ಯಾತ ಪ್ರವಾಸೀ ತಾಣದ ಗಿರಿಜನ ಮನೆ ಹೊತ್ತಿ ಉರಿದಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಜಾನಪದ ಲೋಕದಲ್ಲಿ ನಿರ್ಮಾಣ ಮಾಡಿದ ಹಾಡಿ ಜನಗಳ ಮನೆ ಹೊತ್ತಿ ಉರಿದಿದೆ. ಹೀಗಾಗಿ ಸಿಡಿಲಿನ ಆರ್ಭಟಕ್ಕೆ ಪ್ರವಾಸಿಗರು ಆತಂಕಗೊಂಡಿದ್ದರು.
ಹುಲ್ಲಿನಿಂದ ಮಾಡಿದ ಮನೆಗೆ ಸಿಡಿಲು ಬಡಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಮೈಸೂರಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ: ಧರೆಗುರುಳಿದ ಮರದ ರೆಂಬೆ ಕೊಂಬೆಗಳು!
ಮೈಸೂರಿನಲ್ಲಿ ಇಂದು ಹಲವೆಡೆ ಬಿರುಗಾಳಿ ಸಹಿತ ಬಾರಿ ಮಳೆ ಹಿನ್ನೆಲೆ ಮರದ ರೆಂಬೆ ಕೊಂಬೆಗಳು ಧರೆಗುರುಳಿವೆ. ನಗರದ ಕಾಳಿದಾಸ ರಸ್ತೆಯಲ್ಲಿ ಕಾರುಗಳ ಮೇಲೆ ಮರದ ರಂಬೆಗಳು ಬಿದ್ದ ಪರಿಣಾಮ ಕಾರುಗಳು ಜಖಂ ಆಗಿವೆ. ಬಿರುಗಾಳಿಯ ರಭಸಕ್ಕೆ ರಂಬೆ ಕೊಂಬೆಗಳು ತುಂಡಿರಿಸಿವೆ.
ಮಂಡ್ಯದಲ್ಲಿ ಮೊದಲ ಮಳೆಯಿಂದ ರೈತರು ಹರ್ಷ
ಮಂಡ್ಯದಲ್ಲಿ ಇಂದು ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಆ ಮೂಲಕ ಬಿಸಿಲ ಬೇಗೆಯಿಂದ ಬಸವಳಿದಿದ್ದ ಮಂದಿಗೆ ಮಳೆರಾಯ ತಂಪೆರೆದಿದ್ದಾನೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ ಆಗಿದೆ. ವರ್ಷದ ಮೊದಲ ಮಳೆ ಕಂಡು ರೈತರು, ಮಂಡ್ಯ ಜನರ ಮೊಗದಲ್ಲಿ ಹರ್ಷ ಉಂಟಾಗಿದೆ.
ಸಿಡಿಲು ಬಡಿದು ಮಹಿಳೆ ಹಾಗೂ 20ಕ್ಕೂ ಹೆಚ್ಚು ಮೇಕೆಗಳು ಸಾವು!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸುತ್ತಮುತ್ತ ಬಿರುಗಾಳಿ ಸಹಿತ ಮಳೆ ಹಿನ್ನಲೆ ಸಿಡಿಲು ಬಡಿದು ಮಹಿಳೆ ಹಾಗೂ 20ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿರುವ ಘಟನೆ ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದ ಬಳಿ ಸಂಭವಿಸಿದೆ. ಮಳೆ ಬರುತ್ತಿದ್ದಾಗ ಮರದ ಕೆಳಗೆ ನಿಂತಿದ್ದ ರತ್ನಮ್ಮ ಮೃತ ದುರ್ದೈವಿ. ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.