ಹೊಸಕೋಟೆ : ಹೊಸಕೋಟೆ ತಾಲೂಕಿನಲ್ಲಿ ಹಲವೆಡೆ ಶುಕ್ರವಾರ ವಾರ ಸಂಜೆ ಮೋಡ ಕವಿದ ವಾತಾವರಣ ಉಂಟಾಗಿ ಗಾಳಿಯೊಂದಿಗೆ ಗುಡುಗು ಸಿಡಿಲು ಸಹಿತ ಮಳೆ ಸುರಿದಿದ್ದು, ಭುವಿಯನ್ನು ತಂಪಾ ಗಿಸಿ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಕಳೆದ 3-4 ತಿಂಗಳಿಂದ ಸಹಿಸಲು ಅಸಾಧ್ಯ ವಾದ ಉಷ್ಣಾಂಶದಿಂದ ಸುಡುತ್ತಿರುವ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ನಾಗರೀಕರು, ಯಾವಾಗ ಮಳೆ ಸುರಿದು ಭೂಮಿ ತಂಪಾಗುವುದೆಂದು ಆಕಾಶದೆಡೆಗೆ ಮುಖ ಮಾಡಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಉತ್ತಮ ಮಳೆ ಸುರಿದು ರಸ್ತೆಯ ಇಕ್ಕೆಲಗಳಲ್ಲಿ ನೀರು ಹರಿದು, ವಾತಾವರಣವನ್ನು ತುಸು ತಂಪಾಗಿಸಿದ್ದಲ್ಲದೆ, ಪ್ರಾಣಿ ಪಕ್ಷಿಗಳ ಮೊಗದಲ್ಲಿ ಜೀವಕಳೆ ಮರಳಿ ಬರುವಂತಾಗಿದೆ.
ಬಿಸಿಲಿನ ಬೇಗೆಗೆ ತುತ್ತಾಗಿ ಕೆರೆ, ಕುಂಟೆ, ಕಾಲುವೆಗಳು ಬಹುತೇಕ ಬತ್ತಿ ಹೋಗಿ ಕಾಡುಪ್ರಾಣಿ ಪಕ್ಷಿಗಳು ಗುಟುಕು ನೀರಿಗಾಗಿ ವಿಲವಿಲ ಒದ್ದಾಡುವ ಶೋಚನೀಯ ಸ್ಥಿತಿಯಲ್ಲಿತ್ತು. ಕೆಲವೆಡೆ ಕಾಲುವೆ, ಚೆಕ್ ಡ್ಯಾಂಗಳಲ್ಲಿ ಅಲ್ಪ ಪ್ರಮಾಣದ ನೀರು ಶೇಖರಣೆಯಾಗಿ ಜಾನು ವಾರು, ಪ್ರಾಣಿ ಪಕ್ಷಿಗಳ ದಾಹ ನೀಗಲಿದೆ.
ಮಳೆ ಬಂದ ಸಂತಸ ಒಂದೆಡೆಯಾದರೆರೈತರು ಬೆಳೆದಿದ್ದಮಾವು, ದ್ರಾಕ್ಷಿ, ಕಾಯಿಪಲ್ಯ, ತರಕಾರಿ ಬೆಳೆಗಳು ಕಟಾವಿಗೆ ಬಂದ ಬೆಳೆಗಳು ರೋಗಕ್ಕೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ನಾನಾ ರೀತಿಯ ಸಾಂಕ್ರಾಮಿಕ ರೋಗ ಗಳು ವ್ಯಾಪಿಸಿ ಕಾಯಿಲೆಗೆ ತುತ್ತಾಗುವ ಭೀತಿ ಎದುರಾಗಿದೆ.