ಇಂದು ಕೂಡ ನಗರದೆಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿದೆ
ಬೆಂಗಳೂರು, ಮೇ 03: ಭಾರಿ ಬಿಸಿಲಿನಿಂದ ಕಂಗಾಲಾಗಿದ್ದ ಬೆಂಗಳೂರು ನಗರಕ್ಕೆ ನಿನ್ನೆ ಗುರುವಾರ ಬೇಸಿಗೆ ಮಳೆ ಸುರಿದಿತ್ತು. ಆ ಮೂಲಕ ನಿನ್ನೆ ಗುರುವಾರ ಬೆಂಗಳೂರಿನ ಜನರು ಮೊದಲ ಮುಂಗಾರು ಪೂರ್ವ ಮಳೆಯನ್ನು ಸಂಭ್ರಮಿಸಿದ್ದರು. ಇಂದು ಕೂಡ ನಗರದೆಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿದೆ. ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್, ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್, ನಂದಿನಿ ಲೇಔಟ್, ಮಹಾಲಕ್ಷ್ಮಿ ಲೇಔಟ್, ಕುರುಬರಹಳ್ಳಿ, ಲಗ್ಗೆರೆ, ಕೆ.ಆರ್.ಪುರಂ, ವೈಟ್ ಫೀಲ್ಡ್, ಬೆಂಗಳೂರು ದಕ್ಷಿಣ ಭಾಗದಲ್ಲಿ ಮೋಡ ಕವಿದ ವಾತಾವರಣದ ಜೊತೆ ಮಳೆ ಸುರಿಯುತ್ತಿದೆ.
ಪರಿಣಾಮ ಪ್ರತಿ ದಿನ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರುತ್ತಿದ್ದ ಬೆಂಗಳೂರು ನಗರದ ತಾಪಮಾನ ಇಂದು ಮಧ್ಯಾಹ್ನ 3 ಗಂಟೆಯ ನಂತರ 23 ಡಿಗ್ರಿಯಿಂದ 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ಇಳಿಕೆಯಾಗಿತ್ತು.
ಬಿರು ಬಿಸಿಲಿಗೆ ಬೆಂದು ಹೋಗಿದ್ದ ಬೆಂಗಳೂರಿಗೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ಇಂದೂ ಕೂಡ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅದರಂತೆ ಇದೀಗ ನಗರದ ಹಲವು ಏರಿಯಾಗಳಲ್ಲಿ ಮಳೆ ಶುರುವಾಗಿದ್ದು, ಇನ್ನು ಕೆಲವೆಡೆ ಭಾರೀ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಿಡಿಲು ಜೋರಾಗಿ ಮಳೆ ಸುರಿದಿದೆ.
ಮಳೆ ಕಾರಣ ಪ್ಯಾಲೇಸ್ ರಸ್ತೆ ಅಂಡರ್ ಪಾಸ್ಗಳಲ್ಲಿ ಜನರು ಆಸರೆ ಪಡೆದುಕೊಂಡಿದ್ದರು. ಅಂಡರ್ ಪಾಸ್ ಗಳಲ್ಲಿ ವಾಹನಗಳು ನಿಂತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ವಸಂತನಗರ ಸುತ್ತಮುತ್ತ ಕೂಡ ಜೋರು ಮಳೆ ಆಗುತ್ತಿದ್ದು, ನಿನ್ನೆಗಿಂತ ಇಂದು ಜೋರಾಗಿದೆ. ಜಯನಗರ, ಬಸವನಗುಡಿ, ಸೌತ್ ಎಂಡ್ ಸರ್ಕಲ್ ಬಳಿಯೂ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ.