*ರೈತರ ಸಾಲ ಮನ್ನಾ ಮಾಡಲೊಪ್ಪದ ಮೋದಿಯಿಂದ ಶ್ರೀಮಂತರ ಸಾಲ ಮನ್ನಾ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬಾಗಲಕೋಟೆ : ರೈತ ಸಾಲ ಮನ್ನಾ ಮಾಡಲು ಯಾವುದೇ ಕಾರಣಕ್ಕೂ ಒಪ್ಪದ ಮೋದಿ ಅತ್ಯಂತ ಶ್ರೀಮಂತ ಬಂಡವಾಳಶಾಹಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ಮೋದಿಯವರು ಬಡ ಭಾರತೀಯರನ್ನು ನಂಬಿಸಿದ್ದ, ಭಾಷಣಗಳಲ್ಲಿ ಹೇಳಿದ ಯಾವುದೇ ಭರವಸೆಗಳನ್ನು ಈಡೇರಿಸದೇ ‘ಸುಳ್ಳಿನ ಸರದಾರ’ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
ಅವರು ಇಂದು ಪ್ರಜಾಧ್ವನಿ-02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರ ಪರವಾಗಿ ಮತದಾರರಲ್ಲಿ ಮತ ಯಾಚಿಸಿ ಮಾತನಾಡಿದರು.
ಬಸವಣ್ಣ ಹುಟ್ಟಿದ ಸ್ಥಳವಾಗಿರುವ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಈ ಬಜೆಟ್ ನಲ್ಲಿ ಘೋಷಿಸಲಾಗಿದೆ. 2013 ರಲ್ಲಿ ಬಸವಣ್ಣನವರ ಜನ್ಮದಿಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದ್ದೇನೆ. ನನಗೆ ಬಸವಾದಿ ಶರಣರ ತತ್ವಾದರ್ಶಗಳ ಮೇಲೆ ಅಪಾರ ನಂಬಿಕೆಯಿದೆ. ಶರಣರ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ. ಬಸವಣ್ಣನವರ ವಿಚಾರಧಾರೆಯನ್ನು ಪಾಲಿಸಬೇಕೆಂಬ ಉದ್ದೇಶದಿಂದ ಅವರ ಭಾವಚಿತ್ರವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇಡಬೇಕೆಂದು ಆದೇಶ ಮಾಡಿದೆ. ಜಾತಿ ವರ್ಗ ವ್ಯವಸ್ಥೆ ತೊಲಗಿ ಸಮಾನತೆ ಸ್ಥಾಪನೆಯಾಗಿ, ಜಾತ್ಯಾತೀತ ಸಮಾಜ ನಿರ್ಮಾಣವಾಗಬೇಕೆಂಬ ಆಶಯವನ್ನು ಬಸವಣ್ಣನವರು ಹೊಂದಿದ್ದರು. ವಿಶ್ವಗುರು ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ನಮ್ಮ ಸರ್ಕಾರ ಘೋಷಣೆ ಮಾಡಿದೆ. ಈ ಕಾರ್ಯವನ್ನು ಬಿಜೆಪಿಯಿಂದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರಾಗಲಿ ಮಾಡಲಿಲ್ಲ ಎಂದರು.
ಮೋದಿಯವರು ಕಂಬಳಿ ಹಾಕಿಕೊಂಡು ಮಾಡಿದ ಭಾಷಣ ಕೇವಲ ನಾಟಕ
ಕಾಂಗ್ರೆಸ್ ನವರು ಶಿವಾಜಿ ಮಹಾರಾಜರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮನಿಗೆ ಗೌರವ ನೀಡಲಿಲ್ಲ ಎಂದು ಮೋದಿಯವರು ಸುಳ್ಳು ಹೇಳಿದ್ದರು , ಆದರೆ ಸರ್ಕಾರದ ವತಿಯಿಂದ ಕಿತ್ತೂರು ಚೆನ್ನಮ್ಮ ದಿನಾಚರಣೆಯನ್ನು ಆಚರಿಸಬೇಕೆಂಬ ಆದೇಶವನ್ನು ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರವೇ. ಮೋದಿಯವರು ಕರಿಕಂಬಳಿ ವೇಷ ಹಾಕಿಕೊಂಡು ಭಾಷಣ ಮಾಡಿರುವುದು ಕೇವಲ ನಾಟಕವೇ ಹೊರತು, ಕುರುಬ ಸಮುದಾಯದ ಮೇಲಿನ ಪ್ರೀತಿಯಿಂದಲ್ಲ. ಇವರ ವೇಷ ಭೂಷಣ ನಾಟಕಗಳು ಭಾರತೀಯರಿಗೆ ಈಗ ಅರ್ಥವಾಗಿದೆ ಎಂದರು.
ಕರ್ನಾಟಕದ 28 ಲೋಕಸಭಾ ಚುನಾವಣೆಯಲ್ಲಿ ಒಬ್ಬ ಕುರುಬ ಸಮುದಾಯದವರಿಗಾದರೂ ಟಿಕೇಟನ್ನು ಬಿಜೆಪಿಯ ಮೋದಿ ನೀಡಿಲ್ಲ , ಒಬ್ಬ ಮುಸಲ್ಮಾನನಿಗಾಗಲಿ, ಒಬ್ಬ ಕ್ರಿಶ್ಚಯನ್ನರಿಗಾಗಲಿ ಟಿಕೇಟು ನೀಡಿಲ್ಲ. ಏಕೆಂದರೆ ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯೇ ಇಲ್ಲ ಎಂದರು.