ಉಪಯುಕ್ತ ಸುದ್ದಿ

ದಿನಕ್ಕೆ 10 ಗಂಟೆ ಕೆಲಸದ ಅವಧಿ : ಕೇಂದ್ರದ ಪ್ರಸ್ತಾವನೆ ತಿರಸ್ಕಾರಕ್ಕೆ ಮುಂದಾದ ರಾಜ್ಯ ಸರಕಾರ

Share It

ಬೆಂಗಳೂರು: ದಿನದ ಕೆಲಸದ ಅವಧಿಯನ್ನು ಹತ್ತು ಗಂಟೆಗೆ ಏರಿಕೆ ಮಾಡುವ ಕೇಂದ್ರ ಸರಕಾರದ ತೀರ್ಮಾನಕ್ಕೆ ರಾಜ್ಯ ಸರಕಾರ ಸೆಡ್ಡಿ ಹೊಡೆದಿದ್ದು, ಕೇಂದ್ರದ ಪಸ್ತಾವನೆಯನ್ನು ತಿರಸ್ಕಾರ ಮಾಡಲು ತೀರ್ಮಾನಿಸಿದೆ.

ಕೇಂದ್ರದ ತಿದ್ದುಪಡಿಯನ್ನು ವಿರೋಧಿಸಲು ರಾಜ್ಯ ಸರಕಾರ ಎರಡು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದೆ. ಕಾರ್ಮಿಕರಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ತೀರ್ಮಾನವೂ ರಾಜ್ಯಪಟ್ಟಿಯಲ್ಲಿ ಬರಲಿದ್ದು, ಇದನ್ನು ಕೇಂದ್ರ ಸರಕಾರ ನಿರ್ಧರಿಸಲು ಸಾಧ್ಯವಿಲ್ಲ ಎಂಬುದು ಕರ್ನಾಟಕ ಸರಕಾರದ ವಾದವಾಗಿದೆ.

ಅಂತೆಯೇ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳ ಪ್ರಕಾರ ದಿನಕ್ಕೆ 9 ಗಂಟೆ ಅಥವಾ ವಾರಕ್ಕೆ 48 ಗಂಟೆಗಳ ವೇಳಾಪಟ್ಟಿಯ ಜತೆಗೆ ಹೆಚ್ಚುವರಿ ಸಮಯ ಕೆಲಸ ಮಾಡಲು ಅವಕಾಶ ನೀಡಿದೆ. ಹೀಗಿದ್ದರೂ, 10 ಗಂಟೆಗೆ ಕೆಲಸದ ಅವಧಿಯನ್ನು ಹೆಚ್ಚಿಸುವ ಮೂಲಕ ಅದನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ಸರಕಾರ ವಾದಿಸಿದೆ.

ತಿದ್ದುಪಡಿ ತಿರಸ್ಕಾರ ಮಾಡುವ ನಿರ್ಧಾರವನ್ನು ಇನ್ನೂ ಕೇಂದ್ರಕ್ಕೆ ತಿಳಿಸಿಲ್ಲ. ಆದರೆ, ಕೇಂದ್ರದ ಇಂತಹ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡಲೇಬೇಕಾದ ಹಿನ್ನೆಲೆಯಲ್ಲಿ ಇಂತಹ ತೀರ್ಮಾನ ತೆಗೆದುಕೊಂಡು, ಕೇಂದ್ರ ಸರಕಾರಕ್ಕೆ ಸೆಡ್ಡು ಹೊಡೆಯಬೇಕು ಎಂದು ಮೂಲಗಳು ತಿಳಿಸಿವೆ. ಈ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಸಚಿವ ಸಂತೋಷ್ ಲಾಡ್, ಈ ಕುರಿತು ಸಿಎಂ ಜತೆಗೆ ಚರ್ಚೆ ನಡೆಸಿ, ನಂತರ ಅಂತಿಮ ತೀರ್ಮಾನವನ್ನು ಕೇಂದ್ರ ಸರಕಾರಕ್ಕೆ ತಿಳಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ಮತ್ತೊಂದು ಸುತ್ತಿನ ಹಗ್ಗಜಗ್ಗಾಟಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.


Share It

You cannot copy content of this page