ಬೆಂಗಳೂರು: “ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಬಿಎಂಪಿ) ವಾರ್ಡ್ ಗಳ ಮರುವಿಂಗಡಣಾ ಆಯೋಗವು ವಾರ್ಡ್ ಮರುರಚನೆ, ಗಡಿ ಗುರುತಿಸುವಿಕೆ ಕೆಲಸ ಆರಂಭಿಸಲಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಅವರು ವಿಧಾನಸೌಧದಲ್ಲಿ ಮಂಗಳವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಬಿಎಂಪಿ) ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
“ಈ ಆಯೋಗವು ತಾತ್ಕಾಲಿಕ ವಾರ್ಡ್ ಗಳು, ಗಡಿ ಗುರುತಿಸುವಿಕೆ, ತಕರಾರು ಅರ್ಜಿಗಳ ಸ್ವೀಕಾರ ಮತ್ತಿತರ ಕೆಲಸಗಳ ಅಂತಿಮ ನಿರ್ಣಯಗಳನ್ನು ಒಂದು ತಿಂಗಳ ಕಾಲ ಅಂದರೆ ಸೆಪ್ಟೆಂಬರ್ 1 ರವರೆಗೆ ನಿರ್ವಹಿಸಲಿದೆ. ಆನಂತರ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ತದನಂತರ ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದು ಹೇಳಿದರು.
“ಈ ಎಲ್ಲಾ ಪ್ರಕ್ರಿಯೆ ಮುಗಿದ ತಕ್ಷಣ ನಾವು ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು, ವೇಳಾಪಟ್ಟಿ ನಿಗದಿ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ” ಎಂದರು.
