ಮಂಡ್ಯ: ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನಲ್ಲಿ ಗಣೇಶ ವಿಸರ್ಜನೆ ವೇಳೆ ಕೋಮು ಗಲಭೆ ಉಂಟಾಗಿದ್ದು, ಬುಧವಾರ ರಾತ್ರಿ ನಾಗಮಂಗಲ ತಾಲೂಕು ಹೊತ್ತಿ ಉರಿದಿದೆ.
ಬದರಿಕೊಪ್ಪಲಿನಲ್ಲಿ 5 ದಿನಗಳ ಹಿಂದೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ ಸಂಜೆ ಅದ್ಧೂರಿಯಾಗಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಪಟಾಕಿ ಸಿಡಿಸುತ್ತಾ, ಡೊಳ್ಳು, ತಮಟೆ, ಡಿಜೆ ಸೌಂಡ್‌ನೊಂದಿಗೆ ಹಿಂದೂಗಳು ಗಣೇಶನ ಮೂರ್ತಿ ವಿಸರ್ಜನೆಗೆ ಮೆರವಣಿಗೆ ಹೊರಟಿದ್ದರು.
ಗಣೇಶನ ವಿಸರ್ಜನಾ ಮೆರವಣಿಗೆ ಮಂಡ್ಯ ಸರ್ಕಲ್ ಮಾರ್ಗವಾಗಿ ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯತ್ತ ಮೆರವಣಿಗೆ ಹೊರಟಾಗ ನಾಗಮಂಗಲದ ಮಂಡ್ಯ ಸರ್ಕಲ್ ಬಳಿಯೇ ಕೆಲ ಅನ್ಯಕೋಮಿನ ಯುವಕರು ಮೆರವಣಿಗೆಗೆ ತಡೆಯೊಡ್ದಿದ್ದಾರೆ. ಮಸೀದಿ ಮುಂದೆ ಡಿಜೆ ಸೌಂಡ್, ತಮಟೆ, ಡೊಳ್ಳು ಬಾರಿಸದಂತೆ ಕ್ಯಾತೆ ತೆಗಿದ್ದಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ.
ಅನ್ಯಕೋಮಿನ ಯುವಕರ ಕ್ಯಾತೆಗೆ ಲೆಕ್ಕಿಸದೆ ಗಣೇಶನ ವಿಸರ್ಜನಾ ತಂಡ, ಮೈಸೂರು ರಸ್ತೆಯಲ್ಲಿರುವ ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯಲ್ಲಿ ಮೆರವಣಿಗೆ ಹೊರಟಿದೆ. ಡಿಜೆ ಸೌಂಡ್ ಜತೆ ಡೊಳ್ಳು, ತಮಟೆ ಸದ್ದಿನೊಂದಿಗೆ ಪಟಾಕಿ ಸಿಡಿಸುತ್ತಾ ಸಂಭ್ರಮದಿಂದ ಹೆಜ್ಜೆ ಹಾಕಿದೆ. ಮಸೀದಿಯಿಂದ ಸ್ವಲ್ಪ ದೂರ ಇದೆ ಎನ್ನುವಾಗ ಅನ್ಯಕೋಮಿನ ಯುವಕರು ಏಕಾಏಕಿ ಗಣೇಶ ವಿಸರ್ಜನಾ ಮೆರವಣಿಗೆಯತ್ತ ಕಲ್ಲು ತೂರಾಟ ನಡೆಸಿದ್ದಾರೆ.
ಕಲ್ಲು ತೂರಾಟವಾದಗ ಗಲಾಟೆ ಶುರುವಾಗಿದೆ. ಹಿಂದೂಗಳು ಮತ್ತು ಅನ್ಯಕೋಮಿನ ಯುವಕರ ನಡುವೆ ವಾಕ್ಸಮರ, ತಳ್ಳಾಟ ನೂಕಾಟ ನಡೆದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ. ನಂತರ ಕಲ್ಲುತೂರಾಟ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಹಿಂದೂಗಳು ನಾಗಮಂಗಲ ಪೊಲೀಸ್ ಠಾಣೆ ಮುಂದೆಯೇ ಗಣೇಶನ ವಿಗ್ರಹವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ನಾಗಮಂಗಲ ಪೊಲೀಸ್ ಠಾಣೆ ಮುಂದೆ ಹಿಂದೂಗಳು ಪ್ರತಿಭಟನೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರೆ, ರಾತ್ರಿ 10 ಗಂಟೆ ಸುಮಾರಿಗೆ ನಾಗಮಂಗಲದ ಮಂಡ್ಯ ಸರ್ಕಲ್‌ನಲ್ಲಿ ಅನ್ಯಕೋಮಿನ ಯುವಕರ ಗುಂಪು ಸಿಕ್ಕಸಿಕ್ಕ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಪೆಟ್ರೋಲ್ ಬಾಂಬ್ ನಡೆಸಿದೆ.. ಗುಜರಿ ಅಂಗಡಿ ಹಾಗೂ ಬೈಕ್ ಶೋರೂಂಗೆ ಬೆಂಕಿ ಹಚ್ಚಿದ್ದಾರೆ.
ಕಿಡಿಗೇಡಿಗಳು ರಸ್ತೆಯಲ್ಲೇ ಲಾಂಗು, ರಾಡ್, ತಲ್ವಾರ್‌ಗಳನ್ನು ಹಿಡಿದು ಅಟ್ಟಹಾಸ ಮೆರೆದಿದ್ದಾರೆ. ರಸ್ತೆಯಲ್ಲೇ ಬರುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರು ಕಿಡಿಗೇಡಿಗಳಿಂದ ಲಾಂಗ್ ಸೇರಿ ಇತರೆ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಮಂಡ್ಯ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲಿಸಿದ್ದಾರೆ. ಸೆ. 14ರವರೆಗೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಹೇರಲಾಗಿದೆ.
ಇಂದು ಬಂದ್: ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂಜಾಗ್ರತಾ ಕ್ರಮವಾಗಿ ಇಂದು ನಾಗಮಂಗಲದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಘಟನೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಸಂಘಟನೆ ಇಂದು ನಾಗಮಂಗಲ ಬಂದ್‌ಗೆ ಕರೆ ಕೊಟ್ಟಿದೆ. ಗಲಭೆ ನಡೆಸಿದ 50 ಮಂದಿಯನ್ನು ಬಂಧನ ಮಾಡಿದ್ದು, ನಾಗಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.