ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸೇರಿದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನಡೆಸಿರುವ ದಾಳಿಯು ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ವಿರೋಧ ಪಕ್ಷಗಳ ಪ್ರಬಲ ನಾಯಕರ ರಾಜಕೀಯ ಶಕ್ತಿಯನ್ನು ಕುಂದಿಸಲು ಕೇಂದ್ರ ಸರ್ಕಾರವು ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪರಿಶಿಷ್ಟ ಪಂಗಡ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಖಂಡಿಸಿದ್ದಾರೆ.
ವಿಧಾನಸೌಧದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ದಾಳಿಯಾಗಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ತಾವೂ ಕೂಡ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಲು ತೆರಳಿದ್ದೆರಾದರೂ, ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿ ಅವರು ಸದಾ ಆಳವಾದ ಚಿಂತನೆಗಳನ್ನು ಹೊಂದಿರುವ ಗಟ್ಟಿಗರಾಗಿದ್ದು, ಇಂತಹ ಯಾವುದೇ ಒತ್ತಡಗಳಿಗೆ ಅಥವಾ ದಾಳಿಗಳಿಗೆ ಅವರು ಕುಂದುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅವರು ಯಾವುದೇ ಒತ್ತಡಕ್ಕೂ ಕುಗ್ಗುವ ವ್ಯಕ್ತಿಯಲ್ಲ. ಪ್ರಸ್ತುತ ನಡೆದಿರುವ ಈಡಿ ದಾಳಿಯ ಸಂಪೂರ್ಣ ಮಾಹಿತಿ ಬಹಿರಂಗವಾದ ಬಳಿಕವೇ ಅದರ ಹಿಂದಿನ ಕಾರಣದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಸಚಿವರು ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ವಿಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಸಮುದಾಯಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ.
ತನಿಖಾ ಸಂಸ್ಥೆಗಳ ದಾಳಿಗಳ ವಿಚಾರದಲ್ಲಿ ಕೇಂದ್ರದ ಬಿಜೆಪಿ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದರು. ಬಿಜೆಪಿ ನಾಯಕರು ಬೇರೆ ಪಕ್ಷಗಳ ನಾಯಕರ ರಾಜಕೀಯ ಶಕ್ತಿಯನ್ನು ಕುಂದಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಈಡಿ, ಸಿಬಿಐ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆ ಎಂದು ದೂರಿದರು.
“ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ರಾಜಕೀಯ ಶಕ್ತಿ ಕುಂದಿಸುವ ಉದ್ದೇಶದಿಂದ ಟಾರ್ಗೆಟ್ ಮಾಡುತ್ತಾರೆ”. ಸತೀಶ್ ಜಾರಕಿಹೊಳಿ ಅವರ ಮೇಲಿನ ಕ್ರಮದ ಹಿಂದಿನ ನಿಖರ ಕಾರಣವೇನು ಎಂಬುದು ತಮಗೆ ತಿಳಿದಿಲ್ಲವಾದರೂ, ರಾಜಕೀಯವಾಗಿ ಅವರನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಿಂದೆ ಮಾಜಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದ ಸಂದರ್ಭದಲ್ಲೂ ಇದೇ ರೀತಿ ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗಿತ್ತು. ಬೇರೆ ಪಕ್ಷದವರ ರಾಜಕೀಯ ಬಲವನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳನ್ನು ಅಸ್ತ್ರವನ್ನಾಗಿ ಬಳಸಲಾಗುತ್ತಿದೆ ಎಂದು ಸಚಿವ ಟಿ. ರಘುಮೂರ್ತಿ ಅವರು ಆಕ್ರೋಶ ವ್ಯಕ್ತಪಡಿಸಿದರು.

