ಬಾಗಲಕೋಟೆ: ಕಾಲೇಜಿನಲ್ಲಿ ಕಾಪಿ ಮಾಡಿದ ಆರೋಪ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮುಧೋಳ ಪಟ್ಟಣದ ಶಾರದಾ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಳು ಎಂದು ಕಾಲೇಜಿನ ಆಡಳಿತ ಮಂಡಳಿ ಆರೋಪಿಸಿತ್ತು. ಈ ಕಾರಣದಿಂದ ಪೋಷಕರನ್ನು ಕರೆಸಿ, ಅವರ ಮುಂದೆ ಆಕೆಯನ್ನು ತರಾಟೆಗೆ ತೆಗೆದುಕೊಂಡಿತ್ತು.
ಕಾಪಿ ಹೊಡೆದ ಕಾರಣಕ್ಕೆ ಪೋಷಕರ ಮುಂದೆ ಮರ್ಯಾದೆ ಹೋಯಿತು ಎಂದು ಮನನೊಂದ ವಿದ್ಯಾರ್ಥಿನಿ ಕಾಲೇಜಿನಿಂದ ನೇರವಾಗಿ ಓಡಿಹೋಗಿ ಕೆರೆಗೆ ಹಾರಿದ್ದಾಳೆ ಎನ್ನಲಾಗಿದೆ. ಆಕೆ ಕಾಲೇಜಿನಿಂದ ಕೆರೆಯವರೆಗೆ ಓಡಿ ಹೋಗುತ್ತಿರುವ ದೃಶ್ಯಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಘಟನೆಯ ಸಂಬAಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.