ಯಾದಗಿರಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಹಲವು ದಿನಗಳಿಂದ ಜೋರಾಗುತ್ತಿದೆ. ಹೇಗಾದರೂ ಮಾಡಿ ಮುಖ್ಯಮಂತ್ರಿಯಾಗಲೇಬೇಕೆಂದು ಡಿಸಿಎಂ-ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದಕ್ಕೆ ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಡಿ.ಕೆ ಶಿವಕುಮಾರ್ ಅವರ ನಡೆ, ನುಡಿಗಳು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅದರಲ್ಲೂ ರಾಜ್ಯ ಕಾಂಗ್ರೆಸ್ನಲ್ಲಿ ಇದು ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಇದೀಗ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೋಡಿಹಳ್ಳಿ ಮಠದ ಶ್ರೀಗಳು ಮಹತ್ವದ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಯುಗಾದಿ ನಂತರ ದೇಶ-ವಿದೇಶಗಳಲ್ಲಿ ಏನೇನಾಗಲಿದೆ? ಎನ್ನುವ ಆಘಾತಕಾರಿ ಅಂಶವನ್ನು ಬಿಚ್ಚಿಟ್ಟಿದ್ದಾರೆ.
ಹಾಲುಮತ ಸಮಾಜದವರಿಂದ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ!
ಈ ಬಗ್ಗೆ ಯಾದಗಿರಿಯಲ್ಲಿ ಇಂದು ಮಾತನಾಡಿದ ಕೋಡಿಹಳ್ಳಿ ಶ್ರೀಗಳು, ಎಲ್ಲಾ ಸಮುದಾಯಗಳ ಎಲ್ಲಾ ಜಾತಿ, ಎಲ್ಲಾ ವರ್ಗದವರು ಈ ಭೂಮಿ ಮೇಲೆ ವಾಸವಿದ್ದಾರೆ. ಪ್ರಾಚೀನ ಕಾಲದಿಂದಲೂ ಹಾಲುಮತ ಸಮಾಜ ಅಂತ ಆಂದ್ರೆ ಅಡವಿಯಲ್ಲಿದ್ದು ಕುರಿಗಳನ್ನ ಸಾಕೋದು ಮಾಡ್ತಾರೆ. ಕುರಿಯ ಇಕ್ಕಿಯಲ್ಲಿ ಲಿಂಗವನ್ನ ಕಂಡವರು. ಪ್ರಕೃತಿ ಮೇಲೆ ಗಾಳಿಯ ಮೇಲೆ ಭೂಮಿಯ ಮೇಲೆ ಅವರು ಅಡವಿಯಲ್ಲಿ ಇದ್ದು ಕಂಡದ್ದು ನೋಡಿದ್ದ ಅನುಭವಿಸಿದ್ದನ್ನ ಹೇಳುತ್ತಾ ಬಂದಿದ್ದಾರೆ, ಅದು ಕುರುವಿನ ರಟ್ಟು. ಹಾಲು ಕೆಟ್ಟರೂ ಹಾಲುಮತ ಸಮಾಜ ಕೆಡುವುದಿಲ್ಲ ಅಂತ ಹೇಳುತ್ತಾರೆ. ಇವತ್ತು ಹಾಲುಮತ ಸಮಾಜದವರ ಕೈಯಲ್ಲಿ ರಾಜ್ಯದ ಅಧಿಕಾರವಿದೆ. ಬಿಡಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಅವರಾಗೇ ಬಿಡಬೇಕು. ನೀವು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮುಂದೆ ಏನಾಗುತ್ತೆ? ಎಂದು ಯುಗಾದಿ ಮೇಲೆ ಹೇಳುತ್ತೇನೆ ಎಂದಿದ್ದಾರೆ.
ಈ ಮೂಲಕ ಕೋಡಿಹಳ್ಳಿ ಶ್ರೀಗಳು ಪರೋಕ್ಷವಾಗಿ ಸದ್ಯ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.
ಕರ್ನಾಟಕಕ್ಕೆ ತೊಂದರೆ ತಾಪತ್ರೆಗಳಿಲ್ಲ…
ನಮ್ಮಲ್ಲಿ ಎರಡು ಭಾಗ ಮಾಡುತ್ತಾರೆ. ಒಂದು ಸಂಕ್ರಾಂತಿ ಭವಿಷ್ಯ ಇನ್ನೊಂದು ಯುಗಾದಿ ಭವಿಷ್ಯ ಅಂತ. ಸಂಕ್ರಾಂತಿ ಭವಿಷ್ಯ ಅಂದರೆ ರಾಜರುಗಳಿಗೆ, ಮಹಾರಾಜರುಗಳಿಗೆ ದೊಡ್ಡ ವ್ಯಾಪಾರಸ್ಥರಿಗೆ ಸಂಕ್ರಾಂತಿ ಭವಿಷ್ಯ ಇರುತ್ತೆ. ಯುಗಾದಿ ಮೇಲೆ ಬರೋದು ಚಂದ್ರಮಾನ ಯುಗಾದಿ. ಚಂದ್ರನನ್ನ ಆಧಾರವಾಗಿಟ್ಟುಕೊಂಡು ಮಳೆ,ಬೆಳೆ,ಆಳ್ವಿಕೆಗಳು,ರಾಜರುಗಳು,ಅವಘಡಗಳು,ದುಃಖ- ದುಮ್ಮಾನಗಳು,ಸಂತೋಷಗಳು ಇದರ ಮೇಲೆ ಹೇಳೊದೋ ಯುಗಾದಿ ಸಮಸ್ರಫಲ. ಯುಗಾದಿ ಇನ್ನೊಂದು ತಿಂಗಳು ದೂರವಿದೆ. ಅದರ ಮೇಲೆ ಹೇಳೋದು ಸ್ವಲ್ಪ ಕಷ್ಟ. ನಮ್ಮ ಪ್ರಕಾರ ಬರುವಂತ ದಿನಗಳಲ್ಲಿ ಕರ್ನಾಟಕಕ್ಕೆ ತೊಂದರೆ ತಾಪತ್ರೆಗಳಿಲ್ಲ. ಮಳೆ-ಬೆಳೆ ಚೆನ್ನಾಗಿದೆ, ಸುಭಿಕ್ಷಿತೆ ಇರುತ್ತೆ ಯಾವುದೇ ತೊಂದರೆಗಳು ಕಾಣುತ್ತಿಲ್ಲ.
ಈ ವರ್ಷ ಭೀಕರತೆ ಕಾಡುವ ಲಕ್ಷಣಗಳಿವೆ, ಯುಗಾದಿಯ ಬಳಿಕ ಮತ್ತೆ ಜಾಗತಿಕ ಬಗ್ಗೆ ಬಹಳ ಅಜಾಗರೂಕತೆಯಿದೆ. ಹೋದ ವರ್ಷಕ್ಕಿಂತ ಈ ವರ್ಷ ಇನ್ನೂ ಭೀಕರತೆ ಕಾಡುವ ಲಕ್ಷಣಗಳಿವೆ. ಭೂಮಿ ಅಗಲಾಗೊಂದು(ಭೂಕಂಪ), ಸಾವು-ನೋವು ಸಂಭವಿಸೋದು, ಕಟ್ಟಡಗಳು ನೆಲಕ್ಕುರುಳೋದು ಮುಂದುವರೆಯುತ್ತೆ. ಭೂ ಸುನಾಮಿ, ಜಲ ಸುನಾಮಿ,ಬಾಹ್ಯ ಸುನಾಮಿ ಅಂತ ಹೇಳುತ್ತಿವೆ. ಇಲ್ಲಿವರೆಗೆ ಬರೀ ಜಲ ಸುನಾಮಿ ಆಗುತ್ತಿತ್ತು. ಈ ಬಾರಿ ಭೂಸುನಾಮಿ ಕೂಡ ಆಗುತ್ತೆ ಎಂದು ಕೋಡಿಹಳ್ಳಿ ಶ್ರೀ ಸ್ಫೋಟಕ ಭವಿಷ್ಯ ನುಡಿದಿದ್ದು, ಜೊತೆಗೆ ಬಾಹ್ಯಾಕಾಶದಲ್ಲೂ ಸುನಾಮಿ ಆಗುತ್ತೆ. ಅದನ್ನ ಯುಗಾದಿ ನಂತರ ಹೇಳುತ್ತೇನೆ ಎಂದರು.