ಮನುಷ್ಯ ಒಬ್ಬ ಸಂಘ ಜೀವಿ ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ ನಮ್ಮ ಸುತ್ತಮುತ್ತಲೂ ಕಡಿಮೆ ಮಾತನಾಡುವ ಅಥವಾ ಸದಾ ಮೌನವಾಗಿ ಎಲ್ಲವನ್ನೂ ಆಲಿಸುವವರು ಇರುತ್ತಾರೆ. ಅವರನ್ನು ನಾವು ಮೂಕ ಎಂದು ತಮಾಷೆ ಮಾಡುವುದುಂಟು. ಆದ್ರೆ ಅವರು ಅಂತರ್ಮುಖಿಗಳಾಗಿರುತ್ತಾರೆ. ಅವರು ನಮಗಿಂತಲೂ ಹೆಚ್ಚು ಬುದ್ದಿಶಾಲಿಗಳು ಆಗಿರುತ್ತಾರೆ. ಅವರ ಗುಣಗಳ ಬಗ್ಗೆ ನೋಡೋಣ ಬನ್ನಿ.
ಮಾತು ಬೆಳ್ಳಿ ಮೌನ ಬಂಗಾರ ಎಂಬ ಗಾದೆ ಮಾತು ಸದಾ ಮಾತಿನ ಬಗ್ಗೆ ಹೇಳುತ್ತದೆ. ಬಡಬಡಾಯಿಸಿ ಮಾತನಾಡುವವರಿಗೆ ಈ ಮಾತು ಸೂಕ್ತ ಉದಾಹರಣೆ. ಮೌನವು ಸಾವಿರಾರು ಅರ್ಥವನ್ನು ಕೊಡುವ ತಾಕತ್ತನ್ನು ಹೊಂದಿದೆ. ಮಾತಿಗಿಂತ ಮೌನಕ್ಕೆ ಹೆಚ್ಚು ಶಕ್ತಿ.
ಆತ್ಮಾವಲೋಕನ ಗುಣ
ಇವರು ಸದಾ ತಮ್ಮ ಬಗ್ಗೆ ಮಾತ್ರ ತಲೆ ಕೆಡೆಸಿಕೊಳ್ಳುತ್ತಾರೆ. ಅನ್ಯರ ಸಹವಾಸಕ್ಕೆ ಹೋಗುವುದಿಲ್ಲ. ಇವರು ತಮ್ಮ ಆಲೋಚನೆಗಳನ್ನು ಬಳ ಪಡಿಸುವ ಕಡೆಗೆ ಗಮನ ಕೊಡುತ್ತಾರೆ. ಇವರು ಸದಾ ಒಂಟಿಯಾಗಿ ಇರಲು ಬಯಸುತ್ತಾರೆ.
ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಾರೆ
ಇವರು ತಮ್ಮ ಸುತ್ತ ಮುತ್ತಲು ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಇವರು ತಾವು ಒಂದು ವಿಚಾರವನ್ನು ಹೇಳುವ ಮುನ್ನ ಅದನ್ನು ಯೋಚನೆ ಮಾಡಿ ಮಾತನಾಡಬೇಕು ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ.
ಉತ್ತಮ ಕೇಳುಗರಾಗಿರುತ್ತಾರೆ.
ಇವರು ಸದಾ ಉತ್ತಮ ಕೇಳುಗರಾಗಿರುತ್ತಾರೆ. ಇವರು ಇತರರ ಮಾತುಗಳನ್ನು ಮತ್ತು ಅವರ ಮಾತಿನ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಅವರು ಮುಂದೆ ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾರೆ. ಇವರ ಮಾತಿನಲ್ಲಿ ಒಂದು ಘನತೆ ತೂಕ ಇರುತ್ತದೆ.
ಸೃಜನಶೀಲತೆ ಹೊಂದಿರುತ್ತಾರೆ
ಇವರು ಇತರರಿಗಿಂತ ಹೆಚ್ಚಿನ ಸೃಜನಶೀಲತೆಯನ್ನು ಹೊಂದಿರುತ್ತಾರೆ. ಇವರು ಹೊಸ ವಿಚಾರಗಳನ್ನು ಬೇಗನೆ ಅಳವಡಿಸಿಕೊಳ್ಳುತ್ತಾರೆ. ನವೀನವಾಗಿ ಯೋಚಿಸುತ್ತಾರೆ. ಕಲಾತ್ಮಕತೆಯಿಂದ ಕೂಡಿರುತಾರೆ. ಇವರಲ್ಲಿ ಒಂದು ಕೆಲಸವನ್ನು ವಿಭಿನ್ನವಾಗಿ ಮಾಡುವ ಕಲೆಯು ಕರಗತವಾಗಿರುತ್ತದೆ.
ಚಿಂತನ ಶೀಲರಾಗಿರುತ್ತಾರೆ
ಇವರು ಬಹಳ ಚಿಂತನ ಶೀಲರು ಮೊದಲೇ ಹೇಳಿದಂತೆ ಇವರಲ್ಲಿ ಯೋಚಿಸಿ ಮಾತನಾಡುವ ಗುಣ ಇರುತ್ತದೆ. ಅವರು ತಮ್ಮ ಶಕ್ತಿ ಮತ್ತು ದೌರ್ಬಲ್ಯ ಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ.