ಅಪರಾಧ ರಾಜಕೀಯ ಸುದ್ದಿ

ರನ್ಯಾ ರಾವ್ ಗೆ ಪರಮೇಶ್ವರ್ 25 ಲಕ್ಷ ರೂ. ನೀಡಿದ್ದಾರೆ: ಡಿಸಿಎಂ ಡಿ.ಕೆ ಶಿವಕುಮಾರ್

Share It

ಬೆಂಗಳೂರು: ನಿನ್ನೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಒಡೆತನದ ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಕೇಂದ್ರ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಇಡಿ ದಾಳಿ ಕರ್ನಾಟಕ ರಾಜಕಾರಣದಲ್ಲಿಯೂ ಕೋಲಾಹಲ ಎಬ್ಬಿಸುವ ಎಲ್ಲ ಸುಳಿವು ದೊರೆತಿದೆ. ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್‌ ಖಾತೆಗೆ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಯಿಂದ ಲಕ್ಷಾಂತರ ರೂಪಾಯಿ ವರ್ಗಾವಣೆಯಾಗಿದೆ ಎಂಬ ಆರೋಪದ ಮೇಲೆ ಇಡಿ ದಾಳಿ ನಡೆದಿದೆ ಎನ್ನಲಾಗಿತ್ತು. ಇದೀಗ ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ನಟಿ ರನ್ಯಾ ರಾವ್​​ಗೆ ಪರಮೇಶ್ವರ್ 15 ರಿಂದ 25 ಲಕ್ಷ ರೂ. ನೀಡಿದ್ದಾರಂತೆ. ಇದನ್ನು ಅವರೇ ತಿಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಜೊತೆ ಮಾತನಾಡಿದ್ದೇನೆ, ರನ್ಯಾಗೆ 25 ಲಕ್ಷ ರೂ. ವರೆಗೆ ನೀಡಿದ್ದಾರಂತೆ. ಕುಟುಂಬದವರಿಗೆಂದು ಆ ಹಣ ಕೊಟ್ಟಿರಬಹುದು. ಪರಮೇಶ್ವರ್ ಪ್ರಭಾವಿ ವ್ಯಕ್ತಿ. ಆದರೆ, ರನ್ಯಾರಂಥ ಹೆಣ್ಮಗಳು ತಪ್ಪು ಮಾಡಿದ್ದರೆ ಕ್ರಮ ಆಗಲಿ. ಪರಮೇಶ್ವರ್ ಮೇಲೆ ಜವಾಬ್ದಾರಿ ಇದೆ, ಅವರು ಗೃಹ ಸಚಿವರು. ನಾನು ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಅವರು ಆರೋಗ್ಯವಾಗಿ ಇದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಚಾರಿಟೇಬಲ್​ ಟ್ರಸ್ಟ್​​ಗಳು ಸಾಕಷ್ಟು ನೆರವು ನೀಡುವ ಕೆಲಸ ಮಾಡುತ್ತಿವೆ. ಶಾಲಾ-ಕಾಲೇಜು ಫೀಸ್​​, ಮದುವೆ ಕಾರ್ಯಗಳಿಗೆ ನೆರವು ನೀಡಲಾಗುತ್ತದೆ. ಈ ರೀತಿಯ ಸಣ್ಣಪುಟ್ಟ ಚಾರಿಟಿ ನಡೆದಿರಬಹುದು, ಅದು ಇಲ್ಲ ಅಂತ ಹೇಳುವುದಿಲ್ಲ. ಮದುವೆ, ಆಸ್ಪತ್ರೆ ಬಿಲ್​​ನಂತಹ ಸಂದರ್ಭದಲ್ಲಿ ನೆರವಾಗಿರಬಹುದು. ಉಳಿದ ವಿಚಾರದ ಬಗ್ಗೆ ಏನು ಮಾಡುತ್ತಾರೋ ನೋಡೋಣ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಆ ಮೂಲಕ ರನ್ಯಾಗೆ ಸಚಿವ ಪರಮೇಶ್ವರ್ ಒಡೆತನದ ಸಂಸ್ಥೆಯಿಂದ ಹಣ ವರ್ಗಾವಣೆ ಮಾಡಿರುವ ವಿಚಾರವನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಇಂಥ ಇಡಿ ದಾಳಿಗಳ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಈ ವಿಚಾರದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಅಧ್ಯಕ್ಷರು, ಮುಖ್ಯಮಂತ್ರಿಗಳ ನಿಲುವೇ ನನ್ನದೂ ಆಗಿರುತ್ತದೆ. ಸೋನಿಯಾ ಗಾಂಧಿ ಕೇಸ್​​ನಿಂದ ಹಿಡಿದು ಎಲ್ಲ ವಿಚಾರವಾಗಿ ನಿತ್ಯ ಹೋರಾಟ ಮಾಡುತ್ತೇವೆ. ನಮಗೆ ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಪರಮೇಶ್ವರ್ ನಿವಾಸಕ್ಕೆ ದೌಡಾಯಿಸಿದ್ದ ಸಚಿವರು…

ಇಡಿ ದಾಳಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸುಳಿವು ದೊರೆತ ಬೆನ್ನಲ್ಲೇ ಗೃಹ ಸಚಿವ ಡಾ. ಜಿ ಪರಮೇಶ್ವರ್​ ನಿವಾಸಕ್ಕೆ ಗುರುವಾರ ಬೆಳಗ್ಗೆ ಸಚಿವರ ದಂಡು ದೌಡಾಯಿಸಿದೆ. ಡಿಸಿಎಂ ಡಿ.ಕೆ ಶಿವಕುಮಾರ್​​, ಸಚಿವರಾದ ಸತೀಶ್ ಜಾರಕಿಹೊಳಿ​, ಚಲುವರಾಯಸ್ವಾಮಿ ಅವರು ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹ ಸಚಿವ ಪರಮೇಶ್ವರ್​ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದ್ದಾರೆ. ಅದಾದ ನಂತರ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಈ ಮಾಹಿತಿ ನೀಡಿದ್ದಾರೆ.


Share It

You cannot copy content of this page