ಸುದ್ದಿ

ಹಾಪ್ ಕಾಮ್ಸ್ ಅಭಿವೃದ್ಧಿಗೆ ರಾಮಲಿಂಗಾ ರೆಡ್ಡಿ ಅವರ ಪಾತ್ರ ದೊಡ್ಡದು: ಅಧ್ಯಕ್ಷ ಗೋಪಾಲಕೃಷ್ಣ

Share It

ಬೆಂಗಳೂರು: ಹಾಪ್ ಕಾಮ್ಸ್ ಅಭಿವೃದ್ಧಿಗೆ ಪ್ರಸ್ತುತ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪಾತ್ರ ಬಹಳ ದೊಡ್ಡದು ಎಂದು ಹಾಪ್ ಕಾಮ್ಸ್ ಅಧ್ಯಕ್ಷ ಗೋಪಾಲಕೃಷ್ಣ ಶ್ಲಾಘನೆ ವ್ಯಕ್ತಪಡಿಸಿದರು.

ಲಾಲ್ ಬಾಗ್ ನಲ್ಲಿ ನಡೆದ ಹಲಸು ಮತ್ತು ಮಾವು ಮೇಳವನ್ನು ಸಚಿವ ರಾಮಲಿಂಗಾ ರೆಡ್ಡಿ  ಅವರು ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿದ ಗೋಪಾಲಕೃಷ್ಣ ಅವರು, ಲಾಲ್ ಬಾಗ್ ಹಾಗೂ ಹಾಪ್ ಕಾಮ್ಸ್ ಅಭಿವೃದ್ಧಿಯಲ್ಲಿ ರಾಮಲಿಂಗಾ ರೆಡ್ಡಿ ಅವರ ಪಾತ್ರವನ್ನು ನೆನಪು ಮಾಡಿಕೊಂಡರು.

ರಾಮಲಿಂಗಾ ರೆಡ್ಡಿ ಅವರು ಹಾಪ್ ಕಾಮ್ಸ್ ಅಭಿವೃದ್ಧಿಯ ಬೆನ್ನೆಲುಬು. ಅವರು ಎಪಿಎಂಸಿ ಸಚಿವರಾಗಿದ್ದಾಗ ಮೂರು ಕೋಟಿ ವೆಚ್ಚದಲ್ಲಿ ಆವರಣದ ಕಾಂಟ್ರೀಟ್ ರಸ್ತೆ ನಿರ್ಮಾಣ ಮಾಡಿಸಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿಕೊಡುವ ಮೂಲಕ ರೈತರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದರು. ನಂತರ ಹತ್ತು ಮಳಿಗೆಗಳನ್ನು ನಿರ್ಮಾಣ ಮಾಡುವ ಮೂಲಕ ಮಾರಾಟಕ್ಕೆ ಅನುಕೂಲ ಕಲ್ಪಿಸಿದ್ದರು. ಎರಡು ಬೋರ್ ವೆಲ್ ಕೊರೆಸಿ ಕೊಟ್ಟಿದ್ದರು ಎಂದರು.

ರೈತ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದಲ್ಲದೆ, ಸರಕಾರದಿಂದ 15 ಕೋಟಿ ಸಾಲ ದೊರಕಿಸುವಲ್ಲಿ ಸಹಕಾರ ನೀಡಿದ್ದರು. ಈ ಎಲ್ಲ ಕೊಡುಗೆಯಿಂದ ಈಗ ಹಾಪ್ ಕಾಮ್ಸ್ ದೊಡ್ಡ ಮಟ್ಟದಲ್ಲಿ ಮೇಳಗಳನ್ನು ಆಯೋಜಿಸುವ ಮೂಲಕ ಗಮನಸೆಳೆಯುತ್ತಿದೆ ಎಂದರು.

ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ, ಹಾಪ್ ಕಾಮ್ಸ್ ಮಾವು ಮೇಳ, ಹಲಸು ಮೇಳ ಆಯೋಜನೆ ಮಾಡಿ ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗುವಂತೆ ಮಾಡುತ್ತಿದೆ. ಈ ವರ್ಷ ಹುಣಸೇ ಮೇಳವನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.

ನಾಗರಿಕರು ವಿವಿಧ ತಳಿಯ, ರುಚಿರುಚಿಯ ಹಣ್ಣುಗಳನ್ನು ಹಾಪ್ ಕಾಮ್ಸ್ ನಿಂದ ಪಡೆಯಬಹುದು. ರೈತರಿಂದ ನೇರವಾಗಿ ಪಡೆಯುವ ಹಣ್ಣುಗಳು ದರ ಹಾಗೂ ಕ್ವಾಲಿಟಿಯಲ್ಲಿ ಉತ್ತಮವಾಗಿರುತ್ತದೆ. ಈಗಾಗಲೇ ಆನ್ ಲೈನ್ ಖರೀದಿಗೆ ಅವಕಾಶವಿದೆ. ಇದನ್ನು ಗ್ರಾಹಕರು ಹೆಚ್ಚಾಗಿ ಬಳಸಿಕೊಳ್ಳಬೇಕು. ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಇದರ ಸದುಪಯೋಗ ಒದಗಿಸುವ ನಿಟ್ಟಿನಲ್ಲಿ ಮೇಳಗಳನ್ನು ಆಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನಿರ್ದೆಶಕರಾದ ಚಂದ್ರೇಗೌಡ ಸೇರಿದಂತೆ ಇನ್ನಿತರ ನಿರ್ದೇಶಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತಿ ಇದ್ದರು.


Share It

You cannot copy content of this page