ಬೆಂಗಳೂರು: ಮೈಸೂರಿನ ಮುಡಾ ಕೇಸ್ ನಲ್ಲಿ ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ನಡೆಸಲು ನೀಡಿದ್ದ ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಅರ್ಜಿ ವಿಚಾರಣೆಯನ್ನು ಅಂತ್ಯಗೊಳಿಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಪುನರಾರಂಭಗೊಂಡ ಸಿಎಂ ಸಿದ್ದರಾಮಯ್ಯ ಅವರ ಅರ್ಜಿ ವಿಚಾರಣೆಯಲ್ಲಿ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ರವಿಕುಮಾರ್ ವರ್ಮಾ ಅವರುಗಳು ವಾದ ಮಂಡಿಸಿದರು.
ನಂತರ ಮಧ್ಯಾಹ್ನ ಖಾಸಗಿ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರಾದ ರಾಘವನ್ ಅವರು ಪ್ರತಿ ವಾದ ಮಂಡಿಸಿದರು.
ಕೊನೆಯಲ್ಲಿ ಸಂಜೆ ಸೂರ್ಯ ಇಳಿಯುವವರೆಗೂ ಕೋರ್ಟ್ ನಲ್ಲಿ ನ್ಯಾ. ಎಂ.ನಾಗಪ್ರಸನ್ನ ಅವರ ಮುಂದೆ ಜೋರಾಗಿ ವಾದ-ಪ್ರತಿವಾದ ಮಂಡನೆ ನಡೆಯಿತು. ಅಂತಿಮವಾಗಿ ನ್ಯಾ. ಎಂ.ನಾಗಪ್ರಸನ್ನ ಅವರ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠ ಅಂತಿಮ ತೀರ್ಪು ನೀಡುವವರೆಗೆ ರಾಜ್ಯಪಾಲರ ಪ್ರಾಸಿಕ್ಯೂಶನ್ ಅನುಮತಿಗೆ ಮಧ್ಯಂತರ ತಡೆಯಾಜ್ಞೆ ಮುಂದುವರೆಸಿ ತೀರ್ಪನ್ನು ಕಾಯ್ದಿರಿಸಿ ಆದೇಶ ಹೊರಡಿಸಿತು.
ಆದರೆ ತೀರ್ಪು ಬರುವವರೆಗೂ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಭವಿಷ್ಯ ಏನಾಗಲಿದೆ? ಎಂಬುದು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಆದರೆ ರಾಜ್ಯಪಾಲರ ಪ್ರಾಸಿಕ್ಯೂಶನ್ ಅನುಮತಿಗೆ ಕೂಡ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಮುಂದುವರೆಸಿರುವ ಕಾರಣ ಸಿಎಂ ಸಿದ್ದರಾಮಯ್ಯ ಅವರು ಸದ್ಯ ಸೇಫ್ ಆಗಿದ್ದಾರೆ. ಇಷ್ಟಾದರೂ ಹೈಕೋರ್ಟ್ ತೀರ್ಪು ಯಾವ ದಿನ, ಯಾವ ಗಳಿಗೆಯಲ್ಲಿ ಬರಲಿದೆ ಎಂಬುದು ಕೂಡ ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ.