ಬೆಂಗಳೂರು: ರಾಜ್ಯ ಸರಕಾರವು ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಾಗಿದ್ದ ಡಾ. ವೆಂಕಟೇಶಯ್ಯ ಅವರನ್ನು ಕಂದಾಯ ಇಲಾಖೆಯ ಅಪರ ಆಯುಕ್ತರಾಗಿ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.
ಜತೆಗೆ ಉಪ ಮುಖ್ಯಮಂತ್ರಿ ಅವರ ಅಪರ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸಲಾಗಿದೆ. ವರ್ಗಾವಣೆ ಆದೇಶವು ತಕ್ಷಣವೇ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಅಥವಾ ಉಪ ಮುಖ್ಯಮಂತ್ರಿ ಅವರ ಪದಾವಧಿ ಮುಗಿಯುವ ವರೆಗೆ ಆದೇಶ ಅನ್ವಯವಾಗಲಿದೆ ಎಂದು ಸರಕಾರದ ಅಧಿಸೂಚನೆ ತಿಳಿಸಿದೆ.
ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ ಉದಯ್ ಕುಮಾರ್ ಶೆಟ್ಟಿ ಅವರನ್ನು ಮುಂದಿನ ನಿಯುಕ್ತಿಗಾಗಿ ಆಡಳಿತ ಸುಧಾರಣಾ ಇಲಾಖೆಯಲ್ಲಿ ಕಾರ್ಯ ನಿಯುಕ್ತಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಡಾ ವೆಂಕಟೇಶಯ್ಯ ಅವರು ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮುಖ್ಯಮಂತ್ರಿಯವರ ಅಪರ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಿದ್ದರು.

