ರಾಜಕೀಯ ಸುದ್ದಿ

ಪ್ರಿಯಾಂಕ್ ಖರ್ಗೆ ಅವರ ಬೆನ್ನಿಗೆ ಸರ್ಕಾರವಿದೆ, ನಾವಿದ್ದೇವೆ: ಸಚಿವ ಶಿವರಾಜ್ ಎಸ್. ತಂಗಡಗಿ

Share It

ಎಚ್ಡಿಕೆಯಿಂದ ಹಾಲಿ ಮತ್ತು ಮಾಜಿ ಸಿಎಂಗೆ ಜಗಳ ಹಚ್ಚುವ ಪ್ರಯತ್ನ

ಎಚ್ಡಿಕೆ ಪ್ಲಾನ್ ಫಲಿಸದ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ವಿರುದ್ಧ ಮುಗಿಬೀಳುತ್ತಿರುವ ಜೆಡಿಎಸ್

ಹಾಸನ: ನ.06

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆಡುಭಾಷೆಯಲ್ಲಿ ಮಾತನಾಡಿರುವ ವಿಚಾರವನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಪ್ರಿಯಾಂಕ್ ಖರ್ಗೆ ಅವರ ಜೊತೆ ನಾವಿದ್ದೇವೆ. ಸರ್ಕಾರವೂ ಅವರ ಪರವಾಗಿ ದೃಢವಾಗಿ ನಿಲ್ಲಲಿದೆ ಎಂದು ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದರು.

ಶುಕ್ರವಾರ ಹಾಸನಲ್ಲಿ‌ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ವಿಡಿಯೋವನ್ನು ತಂಡ ಕಟ್ಟಿಕೊಂಡು ಪ್ರಚಾರ ಮಾಡುವ ಅಗತ್ಯವಿತ್ತೇ? ರಾಜ್ಯದ ಜನತೆಗೆ ಯಾರು ಏನು ಮಾಡಿದ್ದಾರೆ ಎಂಬುದು ಚೆನ್ನಾಗಿ ಗೊತ್ತಿದೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ‌‌ ಪ್ರಯತ್ನ ಫಲಿಸಲಿಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿಸಿ, ಜಗಳ ಹಚ್ಚುವ ಪ್ರಯತ್ನವನ್ನು ಕುಮಾರಸ್ವಾಮಿ ಮಾಡಿದ್ದರು. ಆದರೆ ಅದು ಫಲಿಸಲಿಲ್ಲ. ಇದೀಗ ಪ್ರಿಯಾಂಕ್ ಖರ್ಗೆ ಅವರ ಮೇಲೆ ಮುಗಿಬೀಳುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಬೆನ್ನಿಗೆ ಸರ್ಕಾರವಿದೆ, ನಾವೆಲ್ಲರೂ ಇದ್ದೇವೆ. ಅವರು ಈ ಪ್ರಕರಣದ ಕುರಿತು ಪ್ರಾಮಾಣಿಕ ತನಿಖೆ ನಡೆಸಿಸುತ್ತಿದ್ದಾರೆ ಎಂದು ತಿಳಿಸಿದರು.

ಸ್ಟಿಂಗ್ ಷಡ್ಯಂತ್ರದಲ್ಲಿ ಕಾಂಗ್ರೆಸ್‌ನವರೇ ಇದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೃಪಾ ಆಳ್ವಾ ಅವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಕಾನೂನು ಪ್ರಕ್ರಿಯೆ ತನ್ನದೇ ಆದ ರೀತಿಯಲ್ಲಿ ಮುಂದುವರಿಯುತ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮನೆ ಸಮೀಪದವರೆಗೆ ಮೊಬೈಲ್ ಫೋನ್ ಹೇಗೆ ತಲುಪಿತು? ಸಿಡಿಆರ್ ದಾಖಲೆಗಳಲ್ಲಿ ಅದೇ ಸ್ಥಳವನ್ನು ಏಕೆ ತೋರಿಸಲಾಗುತ್ತಿದೆ? ಆ ಮೊಬೈಲ್ ಅಲ್ಲಿಗೆ ಹೋಗಿದ್ದಾದರೂ ಏಕೆ? ಆ ಇಬ್ಬರು ಯುವಕರು ಯಾರು, ಎಲ್ಲಿಯವರು? ಪರಿಚಯವೇ ಇಲ್ಲದ ಯುವಕರು ಕೇಂದ್ರ ಸಚಿವರ ಮನೆಗೆ ಮೊಬೈಲ್ ಇಡಲು ಬರುತ್ತಾರೆಯೇ? ಈ ಎಲ್ಲ ಪ್ರಶ್ನೆಗಳಿಗೆ ಕುಮಾರಸ್ವಾಮಿ ಅವರೇ ಉತ್ತರ ನೀಡಲಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ ಪ್ರಯತ್ನ; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ. ಅಷ್ಟೇ ಅಲ್ಲದೆ, ನಮ್ಮ ಸರ್ಕಾರದಲ್ಲಿನ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಮುಖ್ಯಮಂತ್ರಿಗಳ ನಡುವೆ ಜಗಳ ಹಚ್ಚುವ ಪ್ರಯತ್ನವನ್ನೂ ಕುಮಾರಸ್ವಾಮಿ ಮಾಡುತ್ತಿದ್ದಾರೆ. ಇಂತಹ ಪ್ರಯತ್ನಗಳನ್ನು ಅವರು ಕೈಬಿಡಲಿ ಎಂದರು.


Share It

You cannot copy content of this page