ಮಂಗನ ಕಾಯಿಲೆ ತಡೆಗಟ್ಟಲು ಮಹತ್ವದ ಹೆಜ್ಜೆಯಿಟ್ಟ ಸರಕಾರ: ಇಲಾಖೆ ಕೈಗೊಂಡ ಕ್ರಮಗಳೇನು ?

Share It

ಶಿವಮೊಗ್ಗ: ಮಂಗನ ಕಾಯಿಲೆ ತಡೆಗೆ ಆರೋಗ್ಯ ಇಲಾಖೆ ಮಹತ್ತರವಾದ ಕ್ರಮಗಳನ್ನು ಕೈಗೊಂಡಿದ್ದು, ಒಂದೂ ಕೂಡ ಸಾವಾಗದಂತೆ ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ.

ಕೆಎಂಸಿ ಮಣಿಪಾಲ್, SIMS ಶಿವಮೊಗ್ಗ, KRIMS ಕಾರವಾರ ಇವುಗಳನ್ನು ರೆಫೆರಲ್ ಆಸ್ಪತ್ರೆಗಳಾಗಿ ಗುರುತಿಸಲಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ತರಬೇತಿಗಳನ್ನು ಸಹ ನೀಡಲಾಗಿದ್ದು, ತೀರ್ಥಹಳ್ಳಿ, ಸಾಗರ, ಸಿದ್ದಾಪುರ, ಹೊನ್ನಾವರ, ಕೊಪ್ಪ, ಎನ್ ಆರ್ ಪುರ ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ರೋಗದ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರನ್ನು ಮುಂದಿನ 21 ದಿನಗಳ ಕಾಲ ಆರೋಗ್ಯ ಇಲಾಖೆ ಸತತ ತಪಾಸಣೆ ಮಾಡುತ್ತದೆ.

ಎಲ್ಲ KFD ರೋಗಿಗಳಿಗೆ ಉಚಿತವಾಗಿ ಆಂಬುಲೆನ್ಸ್‌ ಮತ್ತು ಸಂಪೂರ್ಣ ಚಿಕಿತ್ಸೆ ನೀಡಲಾಗುವುದು. ಈ ಬಾರಿ ಒಂದು ಸಾವು ಸಹ ಉಂಟಾಗಬಾರದು ಎನ್ನುವ ಕಾರಣಕ್ಕೆ ಔಷಧ, ವೈದ್ಯಕೀಯ ಸಿದ್ಧತೆ ಎಲ್ಲವನ್ನೂ ಈಗಲೇ ಮಾಡಲಾಗುತ್ತಿದೆ. ICMR ಹೊಸ ವ್ಯಾಕ್ಸಿನ್‌ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ. ಇನ್ನೊಂದು ವರ್ಷದಲ್ಲಿ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಬಹುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಮಂಗನ ಕಾಯಿಲೆ ಪ್ರತಿ ವರ್ಷ ಅಕ್ಟೋಬರ್‌ನಿಂದ ಜೂನ್ ವರೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಕಂಡುಬರುವ ಈ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ.

ಶಿವಮೊಗ್ಗದಲ್ಲಿ ಈಗಾಗಲೇ ಒಂದು ಕೆಎಫ್‌ಡಿ ಲ್ಯಾಬ್‌ ಕಾರ್ಯನಿರ್ವಹಿಸುತ್ತಿದ್ದು, ಇನ್ನೊಂದು ಲ್ಯಾಬ್‌ ಕೂಡ ಶೀಘ್ರದಲ್ಲೇ ಆರಂಭವಾಗಲಿದೆ. ಈಗಾಗಲೇ ಅಗತ್ಯ ಉಪಕರಣಗಳನ್ನು ಖರೀದಿಸಲಾಗಿದೆ. ಈ ಲ್ಯಾಬ್‌ ಆರಂಭದಿಂದ ಶಿರಸಿ, ಸಿದ್ಧಾಪುರ ಭಾಗದ ಜನರಿಗೆ ಹೆಚ್ಚು ಉಪಯೋಗವಾಗಲಿದೆ. ಮಂಗನ ಕಾಯಿಲೆಯನ್ನು ಗುರುತಿಸಲು ಮತ್ತು ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಇದು ಸಹಕಾರಿಯಾಗಲಿದೆ.

ಸರಿಯಾದ ರೀತಿ ತಪಾಸಣೆಯನ್ನು ನಿಯಮಿತವಾಗಿ ಮಾಡಲಾಗುತ್ತಿದೆ. ಈವರೆಗೆ ಶಿವಮೊಗ್ಗ -1163, ಚಿಕ್ಕಮಗಳೂರು- 124, ಉತ್ತರ ಕನ್ನಡ- 368, ಉಡುಪಿ- 12 ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ನಡೆಸಿದ್ದು, 13 ಜನರಿಗೆ ಕಾಯಿಲೆ ಪತ್ತೆಯಾಗಿದ್ದು, ಎಲ್ಲರಿಗೂ ಸರಿಯಾದ ಚಿಕಿತ್ಸೆ ನೀಡಿ ಗುಣಮುಖರಾಗಿದ್ದಾರೆ.


Share It

You May Have Missed

You cannot copy content of this page