ಮಂಡ್ಯ: ದೇಶದಲ್ಲಿ ಜಾತಿ ಎಲ್ಲಿದೆ ಎಂದು ಪ್ರಶ್ನೆ ಮಾಡಿ ಮೀಸಲಾತಿ ಎಲ್ಲ ಯಾಕ್ ಬೇಕು ಎನ್ನುವ ಕಾಲಘಟ್ಟದಲ್ಲಿ ನಡೆಯುವ ಇಂತಹ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸಿವಂತೆ ಮಾಡುತ್ತಿವೆ.
ಮಂಡ್ಯ ಜಿಲ್ಲೆ ಹನಕೆರೆ ಗ್ರಾಮದಲ್ಲಿ ಶ್ರೀ ಕಾಲಬೈರವೇಶ್ವರ ದೇವಸ್ಥಾನದ ಪ್ರವೇಶಕ್ಕೆ ದಲಿತರು ಪಟ್ಟು ಹಿಡಿದಿದ್ದರು. ಶಾಂತಿ ಸಭೆ ಮೂಲಕ ಜಿಲ್ಲಾಡಳಿತ ದೇವಸ್ಥಾನ ಪ್ರವೇಶಕ್ಕೆ ವ್ಯವಸ್ಥೆ ಮಾಡಿತ್ತು. ಆದರೆ, ಗ್ರಾಮದ ಮುಖಂಡರು ಉತ್ಸವ ಮೂರ್ತಿಯನ್ನೇ ದೇವಸ್ಥಾನದಿಂದ ಹೊರಗೆ ತೆಗೆದುಕೊಂಡು ಹೋಗುವ ಮೂಲಕ ಸೆಡ್ಡು ಹೊಡೆದಿದ್ದಾರೆ.
4 ವರ್ಷಸ ಹಿಂದೆ ಕಾಲಬೈರವೇಶ್ವರ ದೇವಸ್ಥಾನ ನಿರ್ಮಾಣ ಮಾಡಲಾಗಿತ್ತು. ದಲಿತರು ಸೇರಿ ಗ್ರಾಮದ ಎಲ್ಲ ಸಮುದಾಯ ದೇಣಿಗೆ ನೀಡಿತ್ತು. ಆದರೂ, ದೇವಾಲಯಕ್ಕೆ ದಲಿತರಿಗೆ ಪ್ರವೇಶ ಕೊಡಲು ಗ್ರಾಮಸ್ಥರು ಒಪ್ಪಿರಲಿಲ್ಲ. ಕೆಲ ದಿನಗಳ ಹಿಂದೆ ದೇವಸ್ಥಾನ ಮುಜರಾಯಿ ಇಲಾಖೆ ಸುಪರ್ದಿಗೆ ಬರುತ್ತಿದ್ದಂತೆ, ದಲಿತರು ದೇವಸ್ಥಾನ ಪ್ರವೇಶಕ್ಕೆ ಪಟ್ಟು ಹಿಡಿದರು.
ಇದು ವಿವಾದಕ್ಕೆ ತಿರುಗಿ ತಾಲೂಕು ಆಡಳಿತ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿತು. ಗ್ರಾಮಸ್ಥರ ಜತೆಗೆ ಸಂಧಾನ ಮಾತುಕತೆ ನಡೆಸಿತು. ಗ್ರಾಮದ ಕೆಲ ಮುಖಂಡರು ಅಧಿಕಾರಿಗಳ ಮಾತಿಗೆ ಒಪ್ಪಿಗೆ ಸೂಚಿಸಿ, ದೇವಸ್ಥಾನ ಪ್ರವೇಶಕ್ಕೆ ಸಮ್ಮಿತಿಸಿದರು. ಆದರೆ, ಕೆಲವರು ಅದನ್ನು ವಿರೋಧಿಸಿ, ದೇವರ ಮೂರ್ತಿಯನ್ನೇ ಹೊತ್ತೊಯ್ದಿದ್ದಾರೆ.
ದೇವರ ಉತ್ಸವ ಮೂರ್ತಿಯ ಜತೆಗೆ, ದೇವಸ್ಥಾನ ಉದ್ಘಾಟನೆ ವೇಳೆ ಅಳವಡಿಸಿದ್ದ ನಾಮಫಲಕವನ್ನು ಕಿತ್ತುಕೊಂಡು ಹೋಗಿದ್ದಾರೆ. ಎಷ್ಟೇ ಮನವೊಲಿಸಿದರೂ, ಅಧಿಕಾರಿಗಳ ಮತ್ತು ಪೊಲೀಸರ ಮಾತಿಗೆ ಗ್ರಾಮಸ್ಥರು ಬೆಲೆ ಕೊಟ್ಟಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಗಾವಹಿಸಿದ್ದಾರೆ.