2645 ಲೀ. ಎದೆಹಾಲು ದಾನ ಮಾಡಿದ ಮಹಿಳೆ !
ಬೆಂಗಳೂರು: ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ ಎಂಬ ಮಾತಿದೆ. ಅದು ಅದೆಷ್ಟೋ ಅಕಾಲಿಕ ಜನನದ ಮಕ್ಕಳ ಪಾಲಿಗೆ ಸಂಜೀವಿನಿಯಾಗಿದೆ. ಇಲ್ಲೊಬ್ಬಳು ಮಹಾತಾಯಿ ತನ್ನ ಎದೆಹಾಲು ದಾನದ ಮೂಲಕ 3.5. ಲಕ್ಷ ಮಕ್ಕಳ ಪ್ರಾಣ ಉಳಿಸಿದ್ದಾಳೆ.
ಅಮೆರಿಕದ ಟೆಕ್ಸಾಸ್ ನ ಆಲಿಸ್ ಓಗ್ಲೆಟ್ರಿ ಎಂಬ 36 ವರ್ಷದ ಮಹಿಳೆ 2010 ರಿಂದ ಸತತವಾಗಿ ತನ್ನ ಎದೆಹಾಲು ದಾನ ಮಾಡುತ್ತಾ ಬಂದಿದ್ದಾರೆ. ಆಕೆ 2645.58 ಲೀ. ಹಾಲು ದಾನ ಮಾಡುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾರೆ.
ವೈದ್ಯರ ಪ್ರಕಾರ ಒಂದು ಲೀ. ಎದೆಹಾಲು 11 ಅವಧಿಪೂರ್ವ ಜನಿಸಿದ ಮಕ್ಕಳ ಪ್ರಾಣವನ್ನು ಉಳಿಸಬಲ್ಲದು. ಈವರೆಗೆ ಆಲಿಸ್ ದಾನ ಮಾಡಿರುವ ಎದೆಹಾಲು 3.5 ಲಕ್ಷ ಪ್ರಾಣವನ್ನು ಉಳಿಸಿದೆ ಎಂದು ಹೇಳಲಾಗಿದೆ.
ಆಕೆ 2010 ರಲ್ಲಿ ತನ್ನ ಮೊದಲ ಮಗ ಜನಿಸಿದ ಸಂದರ್ಭದಲ್ಲಿ ಎದೆಹಾಲು ದಾನ ಮಾಡಲು ಆರಂಭಿಸಿದರು. 2014 ರಲ್ಲಿ 1569.79 ಲೀ.ಎದೆಹಾಲು ದಾನದ ಮೂಲಕ ದಾಖಲೆ ಬರೆದಿದ್ದರು. ಇದೀಗ ಆ ಪ್ರಮಾಣವನ್ನು 2645.58 ಲೀ.ಗೆ ಹೆಚ್ವಿಸಿ ಗಿನ್ನಿಸ್ ದಾಖಲೆ ಸೇರಿದ್ದಾರೆ.
ಆಕೆಗೆ 14, 12 ಹಾಗೂ 7 ವರ್ಷದ ಮೂವರು ಮಕ್ಕಳಿದ್ದು, ಈ ಜತೆಗೆ ಕೆಲ ಸಂದರ್ಭದಲ್ಲಿ ಬಾಡಿಗೆ ತಾಯಿಯಾಗಿಯೂ ಆಕೆ ಗರ್ಭಿಣಿಯಾಗಿದ್ದರು. ಹೀಗಾಗಿ, ಆ ವೇಳೆಯಲ್ಲಿ ಉತ್ಪತ್ತಿಯಾಗುವ ತಮ್ಮ ಎದೆಹಾಲನ್ನು ಅವಶ್ಯವಿರುವ ಮಕ್ಕಳಿಗೆ ದಾನ ಮಾಡುವುದನ್ನು ರೂಢಿಸಿಕೊಂಡರು.
ಅತಿಹೆಚ್ಚಿನ ನೀರು ಸೇವನೆ, ಕ್ರಮಬದ್ಧ ಆಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮದ ಮೂಲಕ ಹಾಲು ಉತ್ಪಾದನೆ ಕುಗ್ಗದಂತೆ ನೋಡಿಕೊಳ್ಳುತ್ತೇನೆ. ಜತೆಗೆ ಪ್ರತಿ ನಾಲ್ಕು ಗಂಟೆಗೊಮ್ಮೆ ನಿಯಮಿತವಾಗಿ ಎದೆಹಾಲು ಪಂಪ್ ಮಾಡುವುದನ್ನು ರೂಢಿಸಿಕೊಂಡಿದ್ದು, ಇದರಿಂದ ಲಕ್ಷಾಂತರ ಮಕ್ಕಳಿಗೆ ಅನುಕೂಲವಾಗಿದೆ. ಇದು ನನಗೆ ಸಂತಸ ತಂದಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.