ಅಲ್ಪಸಂಖ್ಯಾತರಿಗೆ ಕಾಮಗಾರಿ ಗುತ್ತಿಗೆ ಮೀಸಲಾತಿ: ಪ್ರಸ್ತಾವನೆಯೇ ಸರಕಾರದ ಮುಂದಿಲ್ಲ ಎಂದು ಸ್ಪಷ್ಟನೆ
ಬೆಂಗಳೂರು: ಅಲ್ಪಸಂಖ್ಯಾತರಿಗೆ ಸರಕಾರದ ಕಾಮಗಾರಿಗಳಲ್ಲಿ ಮೀಸಲಾತಿ ಒದಗಿಸುವ ಮನವಿಗೆ ಸಿಎಂ ಅನುಮೋದನೆ ನೀಡಿದ್ದು, ಇದೀಗ ಪ್ರಸ್ತಾವನೆಯೇ ಇಲ್ಲ ಎಂದು ನುಣುಚಿಕೊಳ್ಳುತ್ತಿದೆ.
ಅಲ್ಪಸಂಖ್ಯಾತ ಸಮುದಾಯಕ್ಕೆ ಸರಕಾರದ ಎಲ್ಲ ಗುತ್ತೆಗೆಗಳಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಅಲ್ಪಸಂಖ್ಯಾತ ಸಮುದಾಯದ ಸಚಿವರು, ಶಾಸಕರು ಸೇರಿ ಪತ್ರ ಬರೆದಿದ್ದರು. ಇದರ ಆಧಾರದ ಮೇಲೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದರು.
ಮುಸ್ಲಿಂ ನಾಯಕರು ಬರೆದ ಪತ್ರ ಮತ್ತು ಸಿಎಂ ಅನುಮೋದನೆಯ ದಾಖಲೆಯನ್ನಿಟ್ಟುಕೊಂಡು ‘ದಿ ಫೈಲ್’ ವರದಿ ಮಾಡಿತ್ತು. ಈ ವರದಿಯಿಂದಾಗಿ ವಿವಾದ ಹೆಚ್ಚಾಗುತ್ತಿದ್ದಂತೆ ಸಿಎಂ ಕಚೇರಿ, ಸರಕಾರದ ಮುಂದೆ ಇಂತಹ ಪ್ರಸ್ತಾವನೆ ಇಲ್ಲ ಎಂದು ತಿಪ್ಪೆ ಸವರುವ ಕೆಲಸ ಮಾಡುತ್ತಿದೆ.
ಕಾಮಗಾರಿಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಮೀಸಲಾತಿ ನೀಡಬೇಕೆಂಬ ಬೇಡಿಕೆ ಬಂದಿರುವುದು ನಿಜ. ಆದರೆ, ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಸ್ವತಃ ಸಿಎಂ ಸಹಿ ಮಾಡಿ, ಅನುಮೋದನೆ ನೀಡಿರುವ ದಾಖಲೆಯನ್ನಿಟ್ಟುಕೊಂಡು ದಿ ಫೈಲ್ ವರದಿ ಮಾಡಿದೆ.
ರಾಜ್ಯದಲ್ಲಿ ವಕ್ಫ್ ವಿವಾದ ಕಾಂಗ್ರೆಸ್ ಪಾಲಿಗೆ ಬಹುದೊಡ್ಡ ಹಿನ್ನಡೆಯಾಗಿದ್ದು, ಹಿಂದೂ ಸಮುದಾಯದ ವಿರೋಧ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಗುತ್ತಿಗೆ ಮೀಸಲಾತಿ ಎಂಬ ಅಂಶ ಕಾಂಗ್ರೆಸ್ ನ ಮುಸ್ಲಿಂ ಓಲೈಕೆಯ ವಿರುದ್ಧ ಬಹುದೊಡ್ಡ ಜನಾಂದೋಲನಕ್ಕೆ ಕಾರಣವಾಗಲಿದೆ. ಜತೆಗೆ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮೂರು ಕ್ಷೇತ್ರಗಳಲ್ಲಿ ಬಹುದೊಡ್ಡ ಹಿನ್ನಡೆಗೆ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಸಿಎಂ ಕಚೇರಿ ಪಲಾಯನದ ಪ್ರಯತ್ನ ನಡೆಸುತ್ತಿದೆ ಎನ್ನಬಹುದು.