92ರ ವಯಸ್ಸಿನಲ್ಲಿ ತಂದೆಯಾದ ಆಸ್ಟ್ರೇಲಿಯಾ ವೈದ್ಯ; ಜಗತ್ತಿನ ಗಮನ ಸೆಳೆದ ಅಪರೂಪದ ಕಥೆ
ಆಸ್ಟ್ರೇಲಿಯಾದ ವೈದ್ಯರೊಬ್ಬರು ತಮ್ಮ 92ನೇ ವಯಸ್ಸಿನಲ್ಲಿ ಮಗುವಿನ ತಂದೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಜನರಲ್ ಮೆಡಿಸಿನ್ ವೈದ್ಯ ಹಾಗೂ ವಯೋವೃದ್ಧಿ ವಿರೋಧಿ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಡಾ. ಜಾನ್ ಲೆವಿನ್ ಅವರು ತಮ್ಮ 37 ವರ್ಷದ ಪತ್ನಿ ಡಾ. ಯಾನ್ಯಿಂಗ್ ಲು ಅವರೊಂದಿಗೆ ಮಗುವಿಗೆ ಜನ್ಮ ನೀಡಿದ್ದಾರೆ.
ವರದಿಗಳ ಪ್ರಕಾರ, ಡಾ. ಲೆವಿನ್ ಅವರಿಗೆ ಇದು ಮೂರನೇ ಮಗು. ಅವರ ಮೊದಲ ವಿವಾಹದಿಂದ ಜನಿಸಿದ್ದ ಹಿರಿಯ ಪುತ್ರ ಗ್ರೆಗ್ ಅವರು ಮೋಟಾರ್ ನ್ಯೂರಾನ್ ಕಾಯಿಲೆಯಿಂದ ನಿಧನರಾಗುವ ಐದು ತಿಂಗಳ ಮುನ್ನವೇ ಈ ಮಗು ಜನಿಸಿದೆ ಎನ್ನಲಾಗಿದೆ.
ಮೊದಲ ಪತ್ನಿ ನಿಧನರಾದ ಬಳಿಕ ಒಂಟಿತನ ಅನುಭವಿಸಿದ್ದ ಡಾ. ಲೆವಿನ್ ಹೊಸ ಭಾಷೆ ಕಲಿಯಲು ಮುಂದಾಗಿದ್ದರು. ಅದಕ್ಕಾಗಿ ಅವರು ಮ್ಯಾಂಡರಿನ್ ಭಾಷೆ ಕಲಿಯಲು ಆರಂಭಿಸಿದ್ದು, ಅದೇ ವೇಳೆ ಭಾಷಾ ಶಿಕ್ಷಕಿಯಾಗಿ ಪರಿಚಯವಾದವರು ಡಾ. ಯಾನ್ಯಿಂಗ್ ಲು. ಆರಂಭದಲ್ಲಿ ಗುರು-ಶಿಷ್ಯ ಸಂಬಂಧವಾಗಿದ್ದದ್ದು ಕ್ರಮೇಣ ಸ್ನೇಹವಾಗಿ, ನಂತರ ಪ್ರೀತಿಯಾಗಿ ರೂಪಾಂತರಗೊಂಡಿತು.
ನಿರಂತರ ಸಂಪರ್ಕ ಮತ್ತು ಭೇಟಿಗಳ ಬಳಿಕ ಈ ಜೋಡಿ 2014ರಲ್ಲಿ ಲಾಸ್ ವೇಗಾಸ್‌ನಲ್ಲಿ ವಿವಾಹವಾದರು. ಮದುವೆಯಾದಾಗ ಡಾ. ಲೆವಿನ್ ಅವರಿಗೆ 82 ವರ್ಷವಾಗಿದ್ದರೆ, ಯಾನ್ಯಿಂಗ್ ಲು ಅವರಿಗೆ 26 ವರ್ಷ ವಯಸ್ಸು. ಈ ದೊಡ್ಡ ವಯಸ್ಸಿನ ಅಂತರವೇ ಆಗಲೇ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಕೋವಿಡ್ ಲಾಕ್‌ಡೌನ್ ಅವಧಿಯ ನಂತರ ದಂಪತಿ ಮಕ್ಕಳ ಬಗ್ಗೆ ಚಿಂತನೆ ನಡೆಸಿದ್ದು, ಭವಿಷ್ಯದಲ್ಲಿ ಒಂಟಿತನ ತಪ್ಪಿಸಲು ಹಾಗೂ ಕುಟುಂಬದ ಬಂಧ ಉಳಿಸಿಕೊಳ್ಳಲು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಇದೀಗ 92ರ ಹರೆಯದಲ್ಲಿ ತಂದೆಯಾದ ಈ ವೈದ್ಯರ ಕಥೆ ಜಗತ್ತಿನಾದ್ಯಂತ ಗಮನ ಸೆಳೆಯುತ್ತಿದೆ.


