ಉತ್ತರಕನ್ನಡದಲ್ಲಿ ಮತ್ತೆ ಕಾಣಿಸಿಕೊಂಡ KFD: ಹೊಸ ವರ್ಷದ ಆರಂಭದಲ್ಲೇ ಮೊದಲ ಪ್ರಕರಣ ದಾಖಲು

Share It

ಎರಡು ವರ್ಷಗಳ ವಿರಾಮದ ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೈಸನೂರು ಅರಣ್ಯ ರೋಗ–KFD) ಮತ್ತೆ ಪತ್ತೆಯಾಗಿರುವುದು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರಲ್ಲಿ ಚಿಂತೆ ಮೂಡಿಸಿದೆ. ಸಿದ್ದಾಪುರ ತಾಲೂಕಿನ ವೃದ್ಧೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರವಾರ (ಜ.7): ಕಳೆದ ಕೆಲ ವರ್ಷಗಳಿಂದ ನಿಯಂತ್ರಣದಲ್ಲಿದ್ದ ಮಂಗನ ಕಾಯಿಲೆ ಭೀತಿ 2026ರ ಆರಂಭದಲ್ಲೇ ಮತ್ತೆ ತಲೆದೋರಿದೆ. ಜಿಲ್ಲೆಯಲ್ಲಿ ಈ ವರ್ಷದ ಮೊದಲ KFD ಪ್ರಕರಣ ವರದಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಸಿದ್ದಾಪುರ ತಾಲ್ಲೂಕಿನಲ್ಲಿ ಪ್ರಕರಣ ದೃಢ

ಸಿದ್ದಾಪುರ ತಾಲೂಕಿನ ನಿಲ್ಕುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳಗುಂದ ಗ್ರಾಮದಲ್ಲಿ ಸೋಂಕು ಪತ್ತೆಯಾಗಿದೆ. ಹಿಂದೆಯೂ KFD ಪ್ರಕರಣಗಳು ಕಂಡುಬಂದಿದ್ದ ಪ್ರದೇಶದಲ್ಲೇ ಮತ್ತೆ ಕಾಯಿಲೆ ಕಾಣಿಸಿಕೊಂಡಿರುವುದು ಇಲಾಖೆಯ ಗಮನ ಸೆಳೆದಿದೆ.

ವೃದ್ಧ ಮಹಿಳೆಯಲ್ಲಿ ಸೋಂಕು ಪಾಸಿಟಿವ್

ಮುಳಗುಂದ ಗ್ರಾಮದ 80 ವರ್ಷದ ಮಹಿಳೆಗೆ ಕೆಲ ದಿನಗಳಿಂದ ಜ್ವರ ಸೇರಿದಂತೆ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಕ್ತ ಪರೀಕ್ಷೆ ನಡೆಸಲಾಗಿತ್ತು. ಪ್ರಯೋಗಾಲಯ ವರದಿಯಲ್ಲಿ ಮಂಗನ ಕಾಯಿಲೆ ಸೋಂಕು ದೃಢವಾಗಿದೆ. ಅವರನ್ನು ವೈದ್ಯರ ನಿಗಾದಲ್ಲಿ ಇರಿಸಿ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಕಾಯಿಲೆ ಪತ್ತೆಯಾಗಿರುವುದು ಆತಂಕ ಉಂಟುಮಾಡಿದರೂ, ಸದ್ಯ ವೃದ್ಧೆಯ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸಿವೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ KFD ಪ್ರಕರಣಗಳು ಕಡಿಮೆಯಾಗಿದ್ದರೂ, ವರ್ಷದ ಆರಂಭದಲ್ಲೇ ಪ್ರಕರಣ ದಾಖಲಾಗಿರುವುದು ಸಾರ್ವಜನಿಕರಲ್ಲಿ ಮತ್ತೆ ಎಚ್ಚರಿಕೆಯ ವಾತಾವರಣ ನಿರ್ಮಿಸಿದೆ.


Share It

You May Have Missed

You cannot copy content of this page