ಬೆಂಗಳೂರು: ರಾಜ್ಯಕ್ಕೆ ಇಂದು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಭೇಟಿ ನೀಡಲಿದ್ದು, ಡಿನ್ನರ್ ಮೀಟಿಂಗ್ ಮತ್ತು ಬಣ ಬಡಿದಾಟದ ಗೊಂದಲಗಳಿಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ.
ಸಿಎಂ ಬದಲಾವಣೆ ಚರ್ಚೆ, ಪರ ವಿರೋಧ ಹೇಳಿಕೆಗಳು ಮತ್ತು ಡಿನ್ನರ್ ಪಾಲಿಟಿಕ್ಸ್ ಹೆಚ್ಚಾದ ಹಿನ್ನೆಲೆಯಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರನ್ನು ಕಳುಹಿಸಿಕೊಡುತ್ತಿವೆ.
ರಾಜ್ಯ ಪ್ರವಾಸದ ವೇಳೆ ಸರ್ಜೇವಾಲಾ ಅವರು, ಕೆಪಿಸಿಸಿ ಸರ್ವಸದಸ್ಯರ ಸಭೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸೇರಿದಂತೆ ಮುಖಂಡರ ಸಭೆಯನ್ನು ನಡೆಸಲಿದ್ದಾರೆ. ಸಭೆಯಲ್ಲಿ ಬಹಿರಂಗ ಹೇಳಿಕೆ ನೀಡದಂತೆ ಮತ್ತು ಸಿಎಂ ಬದಲಾವಣೆ ಕುರಿತ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ಕೊಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ನಡುವೆ ದಲಿತ ನಾಯಕರು ಕರೆದಿದ್ದ ಡಿನ್ನರ್ ಮೀಟ್ ರದ್ದಾಗಿದ್ದು, ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಸಿದ್ದು, ಡಿ.ಕೆ.ಶಿವಕುಮಾರ್ ಬೆಂಬಲಿಗ ಶಾಸಕರು ಡಿಕೆಶಿ ಮುಂದಿನ ಸಿಎಂ ಎಂಬ ಹೇಳಿಕೆ ನೀಡಿದ್ದು ಸೇರಿದಂತೆ ಅನೇಕ ವಿಚಾರಗಳು ಚರ್ಚೆಗೆ ಬರಲಿವೆ.