ರಾಜಕೀಯ ಸುದ್ದಿ

‘ಶಕ್ತಿ ಯೋಜನೆ’ ಅಪಪ್ರಚಾರ: ಬಹಿರಂಗ ಚರ್ಚೆಗೆ ಬರುವಂತೆ ಆರ್. ಅಶೋಕ್ ಗೆ ಸಚಿವ ರಾಮಲಿಂಗಾ ರೆಡ್ಡಿ ಸವಾಲ್ !

Share It

ಬೆಂಗಳೂರು: ಶಕ್ತಿ ಯೋಜನೆ ಸ್ಥಗಿತಗೊಳಿಸಲಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಕೌಂಟರ್ ಕೊಟ್ಟಿದ್ದಾರೆ.

ವಿರೋಧ ಪಕ್ಷದ ನಾಯಕ ಅಶೋಕ್ ಅವರಿಗೆ ಟ್ಟೀಟ್ ಮಾಡುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಶಕ್ತಿ ಯೋಜನೆ ಸಾರಿಗೆ ನಿಗಮಗಳಿಗೆ ಶಕ್ತಿ ತುಂಬಿದೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಎಂಬುದನ್ನು ಅಂಕಿಅಂಶಗಳು ಸಾಬೀತುಪಡಿಸುತ್ತವೆ. ನಾವು ನಿಮ್ಮಂತೆ ಗಾಳಿಯಲ್ಲಿ ಗುಂಡು ಹಾರಿಸೊಲ್ಲ, ಅಂಕಿಅಂಶಗಳೇ ನಮ್ಮ‌ ಅಭಿವೃದ್ಧಿಗೆ ಹಾಗೂ ಸಾಧನೆಗೆ ಮಾನದಂಡ ಎಂದು ಗುಡುಗಿದ್ದಾರೆ‌.

ಸಾರಿಗೆ ಸಂಸ್ಥೆಗಳಲ್ಲಿ ಕಳೆದ‌ 5 ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಯಾವ ಸಾಧನೆ ಮಾಡಿದ್ದೀರ ಎಂಬ ಪಟ್ಟಿ ಕೊಟ್ಟರೆ ನಾವು ನಿಮ್ಮೊಡನೆ ನೇರಾನೇರ ಚರ್ಚಿಸಲು ಬಯಸುತ್ತೇವೆ‌. ಸಾರಿಗೆ ಸಂಸ್ಥೆಗಳನ್ನು ಅಧೋಗತಿ ತಂದು ನಿಲ್ಲಿಸಿರುವುದು ತಮ್ಮ ಅಧಿಕಾರಾವಧಿಯಲ್ಲಿ ಎಂಬ ಕಟು ಸತ್ಯ ನಿಮಗೆ‌ ತಿಳಿದಿದ್ದರೂ ಸಹ ಜಾಣ ಕುರುಡು ತೋರುವ ನಿಮ್ಮ ಬಗ್ಗೆ ನನಗೆ ಕನಿಕರವಿದೆ ಎಂದು ಕುಟುಕಿದ್ದಾರೆ.

ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳ ಆದಾಯದಲ್ಲಿ‌ ಗಣನೀಯ ವೃದ್ಧಿಯಾದರೂ ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬಲು ಸಾಧ್ಯವಾಗಿಲ್ಲದಿರುವುದು ತಮ್ಮ ಸರ್ಕಾರದ ಕೊಡುಗೆ. ಶಕ್ತಿ ಯೋಜನೆಯಿಂದ ದಿನನಿತ್ಯದ ಪ್ರಯಾಣಿಕರ ಸಂಖ್ಯೆ 84 ಲಕ್ಷದಿಂದ 1.08 ಕೋಟಿಗೆ ಏರಿಕೆ ಆಗಿದೆ. ಆದಾಯದಲ್ಲಿ ಗಣನೀಯ ವೃದ್ಧಿ ಆಗಿದೆ. ನಾನು ಈಗಾಗಲೇ ಹಲವು ಬಾರಿ, ತಿಳಿಸಿದ್ದೇನೆ,ಆದಾಯವೇ ಬೇರೆ ಲಾಭವೇ ಬೇರೆ ಎಂದಿದ್ದಾರೆ.

ಬಿ.ಜೆ.ಪಿ ಆಡಳಿತದ ಐದು ವರ್ಷಗಳಲ್ಲಿ ಯಡಿಯೂರಪ್ಪ‌ ಹಾಗೂ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ, ಸಾರಿಗೆ ಸಂಸ್ಥೆಗಳನ್ನು ರೂ.5900 ಕೋಟಿ ನಷ್ಟದಲ್ಲಿಟ್ಟು ಹೋಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ‌ ಹೊರತುಪಡಿಸಿ ಬೇರೆ ಯಾವುದೇ‌ ಸಾರಿಗೆ ನಿಗಮಗಳಿಗೆ ಬಸ್‌ಗಳ ಸೇರ್ಪಡೆ ಮಾಡದೆ, ಡಕೋಟ ಬಸ್ಸುಗಳನ್ನು ಕಾರ್ಯಾಚರಣೆ‌ ಮಾಡಲು ಬಿಟ್ಟು ಹೋಗಿದ್ದೀರಾ ಎಂದು ಟೀಕಿಸಿದ್ದಾರೆ.

ನಮ್ಮ ಸರ್ಕಾರ 6200 ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಕಳೆದೊಂದು ವರ್ಷದಲ್ಲಿ 3400 ಹೊಸ ಬಸ್ಸುಗಳ ಸೇರ್ಪಡೆ ಮಾಡಿದೆ. ಡಕೋಟಾ ಬಸ್ಸುಗಳನ್ನು‌ ಪುನಶ್ಚೇತನ‌ ಮಾಡುವ ಕಾರ್ಯ ಕೈಗೆತ್ತಿಕೊಂಡು 1300 ಬಸ್ಸುಗಳ ಪುನಶ್ಚೇತನ ‌ಕಾರ್ಯ‌ಮಾಡಿದ್ದೇವೆ. ಬಿಜೆಪಿ ಅವಧಿಯಲ್ಲಿ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13,888 ಹುದ್ದೆಗಳು ಖಾಲಿ ಇದ್ದರೂ, ಒಂದೇ ಒಂದು‌ ನೇಮಕಾತಿ ಮಾಡಿಲ್ಲ. ನಮ್ಮ ಸರ್ಕಾರ ಬಂದ ಕೂಡಲೇ 9000 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದು, ಈಗಾಗಲೇ 5800 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ವಿವಿಧ ಹಂತದಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

ನಿಮ್ಮ ಅವಧಿಯಲ್ಲಿ ಸಿಬ್ಬಂದಿಗೆ ತಿಂಗಳ ವೇತನ ಪೂರ್ಣ ಪಾವತಿಯಾಗದೆ , ಅರ್ಧವೇತನ, ಕೆಲವೊಮ್ಮೆ ಆ ವೇತನವೂ ತಿಂಗಳ ಕೊನೆಯವರೆಗೂ, ಒಮ್ಮೊಮ್ಮೆ ಮುಂದಿನ ತಿಂಗಳವರೆಗೂ ಪಾವತಿಯಾಗುತ್ತಿತ್ತು ಈ ಬಗ್ಗೆ ತಮಗೆ ಮಾಹಿತಿ ಇಲ್ಲವೇ? ನಮ್ಮ ಸರ್ಕಾರ ಬಂದ ಮೇಲೆ ನಿಗದಿತ ದಿನಾಂಕದಂದು ನೌಕರರಿಗೆ ವೇತನ ಪಾವತಿಯಾಗುತ್ತಿದೆ ಎಂದಿದ್ದಾರೆ.

ಸಂಸ್ಥೆಗಳಲ್ಲಿ ಹತ್ತು ಹಲವು ಕಾರ್ಮಿಕ‌ ಕಲ್ಯಾಣ ಕಾರ್ಯಕ್ರಮ ಜಾರಿಗೆ ತಂದಿದ್ದು, ಕಳೆದ ಏಳೆಂಟು ವರ್ಷಗಳಿಂದ ಬಾಕಿ ಉಳಿದಿದ್ದ 1000 ಕ್ಕೂ ಅಧಿಕ ಮೃತ ಅವಲಂಬಿತ‌ ಕುಟುಂಬಗಳಿಗೆ ಅನುಕಂಪ ಆಧಾರದಲ್ಲಿ ಹುದ್ದೆ ನೀಡಲಾಗಿದೆ. ಕಳೆದ‌ 5 ವರ್ಷದಲ್ಲಿ ತಮ್ಮ ಸರ್ಕಾರ ಸಂಪೂರ್ಣ ನಿಲ್ಲಿಸಿದ್ದ ಪ್ರಕ್ರಿಯೆ ಇದು. ತಮ್ಮ ಸರ್ಕಾರವು ಬಿಟ್ಟು ಹೋಗಿದ್ದ ರೂ.5900 ಕೋಟಿ‌ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ‌ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ , ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿ ಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.

ನಾನು ಎಲ್ಲಿಯೂ ಕೂಡ, ಯಾವುದೇ ವೇದಿಕೆಯಲ್ಲಾಗಲೀ/ ಮಾಧ್ಯಮಕ್ಕಾಗಲೀ ಶಕ್ತಿ ಯೋಜನೆ ನಡೆಸಲು ಸಾರಿಗೆ ಸಂಸ್ಥೆಗಳು ಕಷ್ಟಪಡುತ್ತಿವೆ ಎಂಬ ಹೇಳಿಕೆಯನ್ನೇ ನೀಡಿಲ್ಲ ಈ ಬಗ್ಗೆ ಮಾಧ್ಯಮಗಳಿಗೂ ಸಹ ಈ ರೀತಿಯ ಸುದ್ದಿಗಳನ್ನು ಪ್ರಕಟಿಸುವ ಮುನ್ನ ನಮ್ಮಿಂದ ನಿಖರ ಮಾಹಿತಿ ಪಡೆದು ಪ್ರಕಟಿಸುವಂತೆ ತಿಳಿಸಲಾಗಿದೆ. ತಮಗೆ ಜನರನ್ನು ದಾರಿ ತಪ್ಪಿಸಲು ದಿನಕ್ಕೊಂದು ವಿಷಯ ಬೇಕು. ಈ ಖಯಾಲಿ ಬಹಳ ಹಾನಿಕಾರಕವಾದದ್ದು ಸಾಧ್ಯವಾದರೆ ಇದನ್ನು ಸಮಾಜದ ಹಿತದೃಷ್ಟಿಯಿಂದ ಬದಲಿಸಿಕೊಳ್ಳಲು ಪ್ರಯತ್ನಿಸಿ ಎಂದು ಸಲಹೆ ನೀಡಿದ್ದಾರೆ.

ಶಕ್ತಿ ಯೋಜನೆ ಮಹಿಳಾ ಸಬಲೀಕರಣದ ಯೋಜನೆ ಅದನ್ನು ಗೌರವಿಸುವ ಕೆಲಸ ಮಾಡಿ, ಇನ್ನಾದರೂ ಈ ಯೋಜನೆ ನಿರಾತಂಕವಾಗಿ ನಡೆಯಲು ಅವಕಾಶ ಮಾಡಿಕೊಟ್ಟು , ಮಹಿಳೆಯರಿಗೆ ತಲುಪುತ್ತಿರುವ ಈ ಯಶಸ್ವಿ ಯೋಜನೆಯಲ್ಲಿ ತಮ್ಮದೊಂದು ಅಳಿಲು ಸೇವೆ ಇರುವಂತಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.


Share It

You cannot copy content of this page