ಪತ್ನಿಯ ಮೇಲಿನ ಎಲ್ಲ ಕಿರುಕುಳವೂ ಕ್ರೌರ್ಯವಲ್ಲ; 20 ವರ್ಷದ ಪ್ರಕರಣ ರದ್ದುಗೊಳಿದ ಹೈಕೋರ್ಟ್
ಮುಂಬಯಿ: ಹೊಸದಾಗಿ ಮದುವೆಯಾದ ಪತ್ನಿ ಮೇಲಿನ ಎಲ್ಲ ಕಿರುಕುಳವನ್ನು ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮುಂಬಯಿ ಹೈಕೋರ್ಟ್ ನ ಔರಂಗಾಬಾದ್ ಪೀಠ ಅಭಿಪ್ರಾಯಪಟ್ಟಿದೆ.
2004 ರಲ್ಲಿ ಜಲಗಾಂವ್ ನ ಸೆಷನ್ ನ್ಯಾಯಾಲಯ ಪತ್ನಿಯ ಆತ್ಮಹತ್ಯೆಗೆ ಪತಿ ಮತ್ತು ಆತನ ಕುಟುಂಬಸ್ಥರ ಕ್ರೌರ್ಯವೇ ಕಾರಣ ಎಂದು ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ. ಜತೆಗೆ, ತೀರ್ಪಿನಲ್ಲಿ ಉಲ್ಲೇಖ ಮಾಡಿರುವ ಯಾವುದೇ ಅಂಶಗಳು ಕ್ರೌರ್ಯಕ್ಕೆ ಸಮ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.
2002 ರಲ್ಲಿ ವಿವಾಹವಾಗಿದ್ದ ಮಹಿಳೆಯೊಬ್ಬರು, ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಪತಿ ಹಾಗೂ ಕುಟುಂಬದ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನೀರು ತರಲು ಕಳುಹಿಸುವುದು, ಕಾರ್ಪೆಟ್ ಮೇಲೆ ಮಲಗಲು ಸೂಚಿಸುವುದು, ನೆರೆಹೊರೆಯವರ ಜತೆಗೆ ಬೆರೆಯದಂತೆ ತಡೆಯುವುದು ಸೇರಿ ವಿವಿಧ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಮಾಡಲಾಗಿತ್ತು.
ಈ ಆರೋಪಗಳನ್ನು ಎತ್ತಿಹಿಡಿದಿದ್ದ ಸೆಷನ್ ಕೋರ್ಟ್, ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಇದೀಗ ಹೈಕೋರ್ಟ್ ಪೀಠ ಶಿಕ್ಷೆಯನ್ನು ರದ್ದುಗೊಳಿಸಿ, ಮೇಲಿನ ಕಿರುಕುಳಗಳು ಕ್ರೌರ್ಯ ಎಂದು ಕರೆಸಿಕೊಳ್ಳುವುದಿಲ್ಲ. ಹೊಸದಾಗಿ ಗಂಡನ ಮನೆಗೆ ಬಂದಾಗ, ಇಂತಹ ಕೆಲ ಸಣ್ಣಪುಟ್ಟ ಘಟನೆ ನಡೆಯುತ್ತವೆ ಎಂದು ಅಭಿಪ್ರಾಯಪಟ್ಟಿದೆ.
ಘಟನೆಯಲ್ಲಿ ಆಕೆಯ ಮೇಲೆ ಯಾವುದೇ ದೈಹಿಕ ಹಾಗೂ ಮಾನಸಿಕ ಕ್ರೌರ್ಯವಾಗಲೀ ಸಾಭೀತಾಗಿಲ್ಲ. ಆಕೆಯನ್ನು ಆಸ್ತಿ ಅಥವಾ ಹಣವನ್ನು ತಂದುಕೊಡುವಂತೆ ಪೀಡಿಸಿಲ್ಲ. ಹೀಗಾಗಿ, ಇದನ್ನು ಕ್ರೌರ್ಯ ಎಂದು ಕರೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ.
2010 ರ ಕರ್ನಾಟಕ ಸರಕಾರ ವರ್ಸಸ್ ಜಿ.ವಿ. ಸಿದ್ದರಾಮೇಶ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖ ಮಾಡಿರುವ ಹೈಕೋರ್ಟ್ ಪೀಠ, ಕಿರುಕುಳ ಎಂದು ನಮೂದಿಸಿರುವುದು ಆತ್ಮಹತ್ಯೆಗೆ ಪ್ರಚೋದಿಸುವ ಹಾಗೂ ದೈಹಿಕ ನೋವುಂಟು ಮಾಡುವಷ್ಟು ಗಂಭೀರವಾಗಿಲ್ಲ ಎಂದು ತಿಳಿಸಿದೆ.