ಇದು ಗಡಿ ಮೀರಿದ ಲವ್ ಸ್ಟೋರಿ: ಸಂಗಾತಿಗಾಗಿ 300 ಕಿ.ಮೀ. ಪ್ರಯಾಣಿಸಿದ ಹುಲಿರಾಯ !

Share It

ಮಹಾರಾಷ್ಟ್ರದಿಂದ ತೆಲಂಗಾಣವರೆಗೆ ಜಾನಿ ಹುಲಿಯ ಪ್ರಯಾಣ

ಹೈದರಾಬಾದ್: ತನ್ನ ಸಂಗಾತಿಗಾಗಿ 300 ಕಿಲೋಮೀಟರ್‌ಗೂ  ಹೆಚ್ಚು ದೂರ ಪ್ರಯಾಣಿಸಿರುವ ಎಂಟು ವರ್ಷದೊಳಗಿನ ಲವ್‌ಲೋರ್ನ್ ಜಾನಿ ಹುಲಿ ಅಚ್ಚರಿ ಮೂಡಿಸಿದೆ‌.

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಿನ್‌ವಾಟ್ ತಾಲೂಕಿನಿಂದ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಉಟ್ನೂರ್‌ಗೆ ಸಂಗಾತಿ ಹುಡುಕುತ್ತಾ 300 ಕಿಲೋಮೀಟರ್‌ಗೂ ಹೆಚ್ಚು ದೂರ ಪ್ರಯಾಣ ಮಾಡಿತ್ತು. ಗಂಡು ಹುಲಿಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಇಂತಹ ದೀರ್ಘ ಪ್ರಯಾಣವನ್ನು ಪ್ರಾರಂಭಿಸುತ್ತವೆ.

ಇದು ಸಂತಾನೋತ್ಪತ್ತಿಯ ಋತುವಾಗಿದ್ದು, ಅವು ತಮ್ಮ ಪ್ರದೇಶದಲ್ಲಿ ಒಬ್ಬರನ್ನು ಹುಡುಕಲು ಸಾಧ್ಯವಾಗದಿದ್ದಾಗ ಸಂಗಾತಿಯನ್ನು ಹುಡುಕಿಕೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚಾರ ಮಾಡುತ್ತವೆ ಎಂದು ಅದಿಲಾಬಾದ್ ಜಿಲ್ಲಾ ಅರಣ್ಯಾಧಿಕಾರಿ ಪ್ರಶಾಂತ್ ಬಾಜಿರಾವ್ ಪಾಟೀಲ್ ತಿಳಿಸಿದ್ದಾರೆ.

ಜಾನಿ ಹುಲಿಯು ಅಕ್ಟೋಬರ್ ಮೂರನೇ ವಾರದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದಿಲಾಬಾದ್‌ನ ಬೋತ್‌ ಮಂಡಲದ ಅರಣ್ಯದಲ್ಲಿ ಆರಂಭದಲ್ಲಿ ಕಾಣಿಸಿಕೊಂಡ ಹುಲಿಯು ನಿರ್ಮಲ್‌ ಜಿಲ್ಲೆಯ ಕುಂತಲ, ಸಾರಂಗಪುರ, ಮಮದ ಮತ್ತು ಪೆಂಬಿ ಮಂಡಲಗಳ ಮೂಲಕ ಉಟ್ನೂರ್‌ ಪ್ರವೇಶಿಸಿತು.

ಹುಲಿ ಹೈದರಾಬಾದ್-ನಾಗ್ಪುರ NH-44 ಹೆದ್ದಾರಿ ದಾಟಿದ್ದು, ಈಗ ತಿರಿಯಾನಿ ಪ್ರದೇಶದತ್ತ ಸಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಗಂಡು ಹುಲಿಗಳು, ತಮ್ಮ ಸಂಗಾತಿ ಇರುವ 100 ಕಿ.ಮೀ ದೂರದ ವ್ಯಾಪ್ತಿಯನ್ನು ವಾಸನೆಯ ಮೂಲಕ ಪತ್ತೆ ಮಾಡುತ್ತವೆ. ಆ ಮೂಲಕ ಸಂಗಾತಿಗಳಿಗೆ ಸಂದೇಶ ಕಳುಹಿಸುತ್ತವೆ.

ಹುಲಿಗಳು ಬೇಟೆಗಾಗಿ ತಾಳ್ಮೆಯಿಂದ ಕಾಯುತ್ತವೆ ಮತ್ತು ಹೊಸ ಪ್ರದೇಶಗಳಲ್ಲಿ ತಮ್ಮ ಅಸ್ತಿತ್ವ ಸ್ಥಾಪಿಸಲು ಹೆಚ್ಚಿನ ದೂರ ಪ್ರಯಾಣಿಸುವ ಸಾಮರ್ಥ್ಯ ಹೊಂದಿವೆ. ಹುಲಿಗಳು ಸಾಮಾನ್ಯವಾಗಿ ಹೊಸದಾಗಿ ಕುಟುಂಬ ರಚಿಸುತ್ತವೆ ಮತ್ತು ಹಿಂದಿನ ಪ್ರದೇಶಗಳನ್ನು ತಮ್ಮ ಮರಿಗಳಿಗೆ ಬಿಟ್ಟು ಬಿಡುತ್ತವೆ.

ಜಾನಿಯ ಪ್ರಯಾಣ ಕೇವಲ ಪ್ರೀತಿಯಲ್ಲ. ಜಾನಿ ಇದುವರೆಗೆ ಐದು ಜಾನುವಾರುಗಳನ್ನು ಕೊಂದಿದೆ ಮತ್ತು ಹಸುಗಳನ್ನು ಬೇಟೆಯಾಡಲು ಮೂರು ವಿಫಲ ಪ್ರಯತ್ನ ಮಾಡಿ ಸೊತಿದೆ. ಇತ್ತೀಚೆಗಷ್ಟೇ ಅವರು ಉಟ್ನೂರಿನ ಲಾಲ್ತೆಕ್ಡಿ ಗ್ರಾಮದ ಬಳಿ ರಸ್ತೆ ದಾಟುತ್ತಿದ್ದ ದೃಶ್ಯ ಕಂಡುಬಂದಿತ್ತು. ಹುಲಿಗಳು ಸಂಗಾತಿ ಹುಡುಕುವುದರಿಂದ ಮನುಷ್ಯರಿಗೆ ಅಪಾಯ ಮಾಡುವುದಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಹುಲಿ ಕಾವಲ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್) ನೆಲೆಸಬಹುದು ಎಂದು ಮುಖ್ಯ ವನ್ಯಜೀವಿ ವಾರ್ಡನ್ ಎಲುಸಿಂಗ್ ಮೇರು ಹೇಳಿದ್ದಾರೆ. ಜಾನಿ ಕೆಟಿಆರ್ ಕೋರ್ ಏರಿಯಾಗೆ ತೆರಳಿದರೆ ಮಹತ್ವದ ಬೆಳವಣಿಗೆಯಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.


Share It

You May Have Missed

You cannot copy content of this page